

ಬಾಲಿವುಡ್ ನಟಿ ಕಂಗನಾ ರಣಾವತ್, ಭಾನುವಾರ (ಫೆ. 5) ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪತ್ರ ಬರೆದುಕೊಂಡಿದ್ದರು. ಅದರಲ್ಲಿ ಹೆಸರು ಹೇಳದೇ ಬಾಲಿವುಡ್ ದಂಪತಿ ತನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕೆಲವರು ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೇಲೆ ಕಂಗನಾ ಆರೋಪ ಮಾಡುತ್ತಿದ್ದಾರೆ ಎಂದು ಉತ್ತರಿಸಿದ್ದರು. ಅದರ ಬೆನ್ನಲ್ಲೇ ಸೋಮವಾರ (ಫೆ. 6) ಮತ್ತೊಂದು ಪತ್ರವನ್ನು ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
‘ನಿನ್ನೆ ರಾತ್ರಿಯಿಂದ ನನ್ನ ಸುತ್ತ ಅನುಮಾನಾಸ್ಪದ ಘಟನೆಗಳೇನೂ ನಡೆದಿಲ್ಲ, ಯಾರೂ ನನ್ನನ್ನು ಹಿಂಬಾಲಿಸುತ್ತಿಲ್ಲ. ಮಾತಿಗೆ ಬಗ್ಗದ ಭೂತಗಳು, ಏಟಿಗೆ ಬಗ್ಗುತ್ತವೆ ಅಂತ ಅದಕ್ಕೇ ಹೇಳುವುದು. ಚಂಗು - ಮಂಗುಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ನೀವು ಯಾರೋ ಹಳ್ಳಿ ಮುಗ್ಧೆಯ ಜತೆ ಆಟವಾಡುತ್ತಿಲ್ಲ. ಇನ್ನಾದರೂ ಸರಿಹೋಗಿ, ಇಲ್ಲವಾದರೆ ಮನೆಗೆ ನುಗ್ಗಿ ಹೊಡೆಯುತ್ತೇನೆ.
ನನ್ನನ್ನು ಹುಚ್ಚಿ ಅಂತ ಅಂದು ಕೊಂಡಿರುವವರಿಗೆ, ನಾನು ಹುಚ್ಚಿ ಅಂತಷ್ಟೇ ಗೊತ್ತು, ಆದರೆ ಎಷ್ಟು ದೊಡ್ಡ ಹುಚ್ಚಿ ಅಂತ ನಿಮಗೆ ಗೊತ್ತಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ ಕಂಗನಾ. ಸದ್ಯ ಕಂಗನಾ ರಣಾವತ್ 1975ರಿಂದ 77ರವರೆಗೆ ಭಾರತದಲ್ಲಿ ವಿಧಿಸಲಾಗಿದ್ದ ತುರ್ತು ಪರಿಸ್ಥಿತಿ ಕುರಿತ ‘ಎಮರ್ಜೆನ್ಸಿ’ ಚಿತ್ರವನ್ನು ನಿರ್ದೇಶಿಸಿ-ನಿರ್ವಿುಸುತ್ತಿರುವ ಜತೆಗೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್