ಕೈ ಮುಗಿದು ಕೇಳಿಕೊಂಡೆ… ಕಾಸ್ಟಿಂಗ್​ ಕೌಚ್​ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ.

Charu Asopa (2)
Published on

ಬಣ್ಣದ ಲೋಕಕ್ಕೆ ಕಾಸ್ಟಿಂಗ್​ ಕೌಚ್​ ಎಂಬ ಕಪ್ಪು ಚುಕ್ಕೆ ಅಂಟಿರುವುದು ಗೊತ್ತಿರುವ ವಿಷಯ. ಈ ಬಗ್ಗೆ ಆಗಾಗ ಸಿನಿಮಾ, ಧಾರಾವಾಹಿ ನಟ, ನಟಿಯರು ಅನುಭವ ಹಂಚಿಕೊಳ್ಳುತ್ತಿರುತ್ತಾರೆ. ಆ ಸಾಲಿಗೆ ಹೊಸ ಸೇರ್ಪಡೆ ಹಿಂದಿ ಕಿರುತೆರೆ ನಟಿ ಚಾರು ಅಸೋಪಾ. ಕಳೆದ 15 ವರ್ಷಗಳಲ್ಲಿ "ಬಾಲ್​ ವೀರ್​', "ದೇವೋನ್​ ಕಾ ದೇವ್​ ಮಹಾದೇವ್​' ಸೇರಿ 20ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತಿ ಚಾರುಗೆ ಸಲ್ಲುತ್ತದೆ.

ಇತ್ತೀಚೆಗಷ್ಟೆ ಕಾಸ್ಟಿಂಗ್​ ಕೌಚ್​ ಅನುಭವ ಬಿಚ್ಚಿಟ್ಟಿರುವ ಅವರು, "ಚಿತ್ರರಂಗದಲ್ಲಿ ಏನಾದರೂ ಸಾಧಿಸಲೇಬೇಕು ಅಂತ ಮುಂಬೈಗೆ ಬಂದವಳು ನಾನು. ಹಲವಾರು ಆಡಿಷನ್​ಗಳಿಗೆ ಹೋಗುತ್ತಿದ್ದೆ. ಹೀಗೆ ಒಮ್ಮೆ ಹೆಸರಾಂತ ನಿರ್ಮಾಪಕನನ್ನು ಭೇಟಿಯಾದಾಗ ನನ್ನ ಮುಂದೆ ಒಪ್ಪಂದದ ಪತ್ರವನ್ನಿಟ್ಟು ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ. ಕೈಮುಗಿದು ನಾನು ಹಾಗೆ ಮಾಡುವುದಿಲ್ಲ ಎಂದು ಕೇಳಿಕೊಂಡೆ. ಪರವಾಗಿಲ್ಲ ಹೊರಗಿರುವ ಹಲವಾರು ಹುಡುಗಿಯರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಅವರು ಮಾಡುತ್ತಾರೆ ಬಿಡಿ ಎಂದ. ಆತನ ಮಾತುಗಳನ್ನು ಕೇಳಿ ಮೂರು ದಿನ ನನಗೆ ಆರೋಗ್ಯ ಕೆಟ್ಟಿತ್ತು. ಬಳಿಕ ನಾನು ಧಾರಾವಾಹಿಗಳಲ್ಲಿ ಮಾತ್ರ ನಟಿಸಲು ನಿರ್ಧರಿಸಿದೆ' ಎಂದು ಹೇಳಿಕೊಂಡಿದ್ದಾರೆ.

ಸದ್ಯ ಚಾರು ಅಸೋಪಾ ಮಾತುಗಳ ಬಗ್ಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ಕೆಟ್ಟದಾಗಿ ನಡೆದುಕೊಂಡ ಆ ನಿರ್ಮಾಪಕ ಯಾರಿರಬಹುದೆಂದು ಚರ್ಚಿಸುತ್ತಿದ್ದಾರೆ.

-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net