

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಲವು ಚಿತ್ರಗಳಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿರುವ ನಾಗಭೂಷಣ, "ಹನಿಮೂನ್' ವೆಬ್ಸರಣಿ, "ಇಕ್ಕಟ್ಟು' ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಇದೀಗ ಡಾಲಿ ಧನಂಜಯ ನಿರ್ಮಾಣದ, ಉಮೇಶ್ ಕೃಪ ನಿರ್ದೇಶನದ "ಟಗರುಪಲ್ಯ' ಚಿತ್ರದಲ್ಲಿ ನಾಯಕನಾಗಿದ್ದು, ಅವರಿಗೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ನವೆಂಬರ್ನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದ್ದು, ಜತೆಗೆ ಇದೇ ತಿಂಗಳ 17ರಂದು ಮೊದಲ ಹಾಡನ್ನು ಬಿಡುಗಡೆ ಮಾಡಲಿದೆ. ಚಿತ್ರದ ಬಗ್ಗೆ ನಾಯಕ ನಾಗಭೂಷಣ, ""ಟಗರುಪಲ್ಯ' ಥಿಯೇಟರ್ಗಳಲ್ಲಿ ರಿಲೀಸ್ ಆಗಲಿರುವ ನನ್ನ ಮೊದಲ ಸಿನಿಮಾ. ಹೀಗಾಗಿ ಸ್ವಲ್ಪ ಭಯ ಇದೆ. ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಸಿನಿಮಾ ಚೆನ್ನಾಗಿದ್ದಾಗ ಬರುವ ಆತ್ಮವಿಶ್ವಾಸ ನನ್ನಲ್ಲೂ ಇದೆ. ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ' ಎಂದು ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ : ಮೂರನೇ ದಿನಕ್ಕೆ ಪಠಾಣ್, ಬಾಹುಬಲಿ ದಾಖಲೆ ಮುರಿದ ‘ಗದರ್ 2’
ಇದು ಪ್ರತಿ ಹಳ್ಳಿಯ ಕಥೆ
"ಟಗರುಪಲ್ಯ' ಹಳ್ಳಿಗಳ ಆಚರಣೆಯ ಕಥೆ. "ಹಳ್ಳಿ ಕಥೆ, ಸಿಟಿಯವರು ನೋಡಬಹುದಾ ಅಂತ ಕೆಲವು ಕೇಳಿದರು. ನಾವೂ ಹಳ್ಳಿಯಿಂದಲೇ ಸಿಟಿಗೆ ಬಂದಿರುವವರು. ನಗರದಲ್ಲಿರುವವರು ವಾರಾಂತ್ಯಕ್ಕೆ ತಮ್ಮ ಊರುಗಳಿಗೆ ಹೋಗುವವರೇ. ಇದು ನನ್ನೂರ ಕಥೆ, ಎಲ್ಲರ ಊರುಗಳ ಕಥೆ. ನಾಗ ಇದ್ದರೆ ನಗಿಸುತ್ತಾನೆ ಅನ್ನೋ ಜನರ ನಿರೀೆಯನ್ನು ಉಳಿಸಿಕೊಳ್ಳಲಿದ್ದೇನೆ. ಚಿತ್ರದಲ್ಲೊಂದು ಸರ್ಪೆಸ್ ಕೂಡ ಇದೆ' ಎನ್ನುತ್ತಾರೆ ನಾಗಭೂಷಣ್.
ಹಾಸ್ಯ ಮಾಡುವ ಶೈಲಿ ಬದಲಾಗಿದೆ
ಹಾಸ್ಯನಟರ ಪೈಕಿ ನಾಗಭೂಷಣ ವಿಭಿನ್ನವಾಗಿ ನಿಲ್ಲುತ್ತಾರೆ. ಅದಕ್ಕೆ ಕಾರಣ ಅವರ ಟೈಮಿಂಗ್ ಮತ್ತು ನಟನಾ ವಿಧಾನ. ಈ ಬಗ್ಗೆ, "ನನ್ನನ್ನು ನಾನು ಹಾಸ್ಯನಟ ಅಂತ ನೋಡುವುದಿಲ್ಲ, ಕಾಮಿಡಿ ಚೆನ್ನಾಗಿ ಮಾಡುವ ಕಲಾವಿದ ನಾನು. ಸಮಯ ಬದಲಾದಂತೆ ತಂತ್ರಜ್ಞಾನ ಬದಲಾಗುತ್ತದೆ, ಅದೇ ರೀತಿ ನಟನೆಯ ಶೈಲಿ ಕೂಡ. ಎಲ್ಲರಂತೆ ನಾವೂ ಮಾಡಲು ಹೋದರೆ ಏಕತಾನತೆ ಎನಿಸುತ್ತದೆ. ಹೀಗಾಗಿಯೇ ನೈಜತೆಗೆ ಹತ್ತಿರವಿರಬೇಕು. ದೈನಂದಿನ ಜೀವನದಲ್ಲೇ ತುಂಬ ಕಾಮಿಡಿಗಳನ್ನು ನೋಡುತ್ತೇವೆ. ಅವರು ಯಾರೂ ಚಿತ್ರ ವಿಚಿತ್ರವಾಗಿ ಭಾವ, ಭಂಗಿ ಮಾಡುವುದಿಲ್ಲ. ನ್ಯಾಚುರಲ್ ಆಗಿರುತ್ತದೆ. ನಾವು ಕ್ಯಾಮರಾ ಮುಂದೆ ಹಾಗೆಯೇ ಇರಬೇಕು. ಜನರನ್ನು ನಗಿಸುವುದಕ್ಕಾಗಿ ಏನೇನೋ ಮಾಡುವ ಅವಶ್ಯಕತೆಯಿಲ್ಲ. ಸ್ಕ್ರಿಪ್ಟ್ನಲ್ಲಿ ಹಾಸ್ಯವಿದ್ದರೆ ಮಾತ್ರ ನಗಿಸಲು ಸಾಧ್ಯ. ಇಲ್ಲದಿದ್ದರೆ ತಿಪ್ಪರಲಾಗ ಹಾಕಿದರೂ ಸಾಧ್ಯವಿಲ್ಲ' ಎಂಬುದು ನಾಗಭೂಷಣ ಅಭಿಪ್ರಾಯ. "ಟಗರುಪಲ್ಯ' ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ಅವರು ನಾಯಕನಾಗಿ ಆಯ್ಕೆಯಾಗಿದ್ದು, ಅದು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ.