ದೋಸೆ ಬೇಕಾ ಬೆಣ್ಣೆ ದೋಸೆ…; ನಟಿ ಅರ್ಚನಾ ಜೋಯಿಸ್ ಅಡುಗೆ ವಿಡಿಯೋ ವೈರಲ್

Archana Jois
Published on

ಬೆಂಗಳೂರು: ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸಿರುವ ಚಿತ್ರ ‘ಹೊಂದಿಸಿ ಬರೆಯಿರಿ’. ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ಧ ಆಚಾರ್ಯ, ಅವಿನಾಶ್ ಶಠಮರ್ಷಣ, ಅರ್ಚನಾ ಜೋಯಿಸ್, ಐಶಾನಿ ಶೆಟ್ಟಿ, ಭಾವನಾ ರಾವ್, ಸಂಯುಕ್ತಾ ಹೊರನಾಡು, ಅರ್ಚನಾ ಕೊಟ್ಟಿಗೆ, ಸಿಸಿಲಿಯಾ ಡೆಬ್ರಮ ಪ್ರಮುಖ ತಾರಾಗಣದಲ್ಲಿದ್ದಾರೆ. ಬಿಡುಗಡೆಗೆ ರೆಡಿಯಾಗಿರುವ ಚಿತ್ರವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡ ವಿಭಿನ್ನ ರೀತಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ಹಲವೆಡೆ ಮನೆ ಮನೆಗಳಿಗೆ ತೆರಳಿ 25 ಸಾವಿರಕ್ಕೂ ಅಧಿಕ ಜನರಿಗೆ ಪತ್ರ ನೀಡಿ, ಚಿತ್ರಮಂದಿರಗಳಿಗೆ ಆಮಂತ್ರಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ನಟಿ ಅರ್ಚನಾ ಜೋಯಿಸ್ ದೋಸೆ ಮಾಡಿ, ಗ್ರಾಹಕರಿಗೆ ಬಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇತ್ತೀಚೆಗೆ ದಾವಣಗೆರೆಯಲ್ಲಿ ಚಿತ್ರದ ಪ್ರಚಾರಕ್ಕೆ ಹೋಗಿದ್ದ ಚಿತ್ರತಂಡ ವಾಕಥಾನ್​ನಲ್ಲಿ ಭಾಗಿಯಾಗಿದೆ. ಬಳಿಕ ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್ ಆಗಿರುವ ಕಾರಣ, ಹೋಟೆಲ್​ಗೆ ಹೋಗಿ ಅಲ್ಲಿ ಪತ್ರಗಳನ್ನು ನೀಡಿದೆ. ಅದೇ ಸಮಯದಲ್ಲಿ ಅರ್ಚನಾ ಜೋಯಿಸ್ ತಾವೇ ದೋಸೆ ಮಾಡಿ, ಗ್ರಾಹಕರಿಗೆ ಸರ್ವ್ ಮಾಡಿದರು. ಆ ವಿಡಿಯೋ ಇದೀಗ ವೈರಲ್ ಆಗಿದೆ ಎನ್ನುತ್ತಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ‘ಹೊಂದಿಸಿ ಬರೆಯಿರಿ’ ಇದೇ ಶುಕ್ರವಾರ ರಾಜ್ಯಾದ್ಯಂತ 120 ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ ನೋಡಿದ ಅಶ್ವಿನಿ: ಕೆಲವು ದಿನಗಳ ಹಿಂದಷ್ಟೇ ನಿರ್ವಪಕಿ ಅಶ್ವಿನಿ ಪುನೀತ್ ರಾಜಕುಮಾರ್, ‘ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದರು. ‘ಅಶ್ವಿನಿ ಮೇಡಂ ಟ್ರೇಲರ್ ನೋಡಿ ಇಷ್ಟಪಟ್ಟು, ನಮ್ಮ ಚಿತ್ರತಂಡವನ್ನು ಮನೆಗೆ ಬರಲು ಹೇಳಿದ್ದರು. ಆಗ ಸಿನಿಮಾ ನೋಡಿದರು. ಟ್ರೇಲರ್​ನಂತೆಯೇ ಸಿನಿಮಾ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ಹೇಳಿಕೊಳ್ಳುತ್ತಾರೆ ಜಗನ್ನಾಥ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net