ನಿಮ್ಮ ಕಾಲಿಗೆ ಬೀಳುತ್ತೇನೆ ಈಗಲಾದರೂ ಎಚ್ಚೆತ್ತುಕೊಳ್ಳಿ... ಸರ್ಕಾರಗಳಿಗೆ ನಟ ವಿಶಾಲ್​ ವಿಶೇಷ ಮನವಿ! Actor Vishal

Actor Vishal
Published on

ಹೈದರಾಬಾದ್: ಕಾಲಿವುಡ್​​ ಸೂಪರ್​ಸ್ಟಾರ್​ ವಿಶಾಲ್ ( Actor Vishal ) ಅವರು​ ತಮಿಳುನಾಡು ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತಮ್ಮ ಸಿನಿ ಮಾರ್ಕೆಟ್ ವಿಸ್ತರಿಸಿಕೊಂಡಿದ್ದಾರೆ. ಅವರ ಅನೇಕ ಚಿತ್ರಗಳು ಎಲ್ಲ ಭಾಷೆಗಳಲ್ಲಿ ಡಬ್​​ ಆಗಿವೆ. ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ವಿಶಾಲ್​ ಗುರುತಿಸಿಕೊಂಡಿದ್ದು, ತಮ್ಮ ಸುತ್ತ ನಡೆಯುತ್ತಿರುವ ಸಮಸ್ಯೆಗಳಿಗೆ ವಿಶಾಲ್​ ಸ್ಪಂದಿಸುತ್ತಾರೆ. ಯಾವುದೇ ಸಮಸ್ಯೆಯನ್ನು ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರಲು ಶ್ರಮಿಸುತ್ತಾರೆ.

ಇತ್ತೀಚೆಗೆ, ವಿಶಾಲ್​ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಮತ್ತೊಂದು ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಕೊಯಮತ್ತೂರಿನಲ್ಲಿ ಅತ್ಯಾಚಾರ ಘಟನೆ ನಡೆಯಿತು. ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಕೆಲ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದರು. ಈ ಘಟನೆ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿತು. ಈ ಘಟನೆಯ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದ್ದು, ಇದೇ ವಿಚಾರವಾಗಿ ವಿಶಾಲ್ ಮಾತನಾಡಿದ್ದಾರೆ. ​

ಅತ್ಯಾಚಾರ ನಡೆದ ಸಮಯದಲ್ಲಿ ಸಂತ್ರಸ್ತೆ ಆ ಸ್ಥಳದಲ್ಲಿ ಇದ್ದಿದ್ದಕ್ಕೆ ಆಕೆಯನ್ನೇ ದೂಷಿಸುವುದು ಸರಿಯಲ್ಲ. ನಮ್ಮ ದೇಶದಲ್ಲಿ ಪದೇಪದೆ ನಡೆಯುತ್ತಿರುವ ಈ ರಕ್ತಸಿಕ್ತ ಅತ್ಯಾಚಾರದ ವಿಷಯಗಳನ್ನು ರಾಜಕೀಯಗೊಳಿಸುವುದನ್ನು ದಯವಿಟ್ಟು ನಿಲ್ಲಿಸಿ. ನ್ಯಾಯಾಂಗ ವ್ಯವಸ್ಥೆ ಮತ್ತು ಶಾಸಕರೇ, ನಾನು ಈಗಲಾದರೂ ನಿಮ್ಮ ಪಾದಗಳಿಗೆ ಬಿದ್ದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಈ ಘೋರ ಅಪರಾಧಕ್ಕೆ ಮರಣದಂಡನೆಯನ್ನು ಜಾರಿಗೆ ತನ್ನಿ.

ನಿರ್ಭಯಾ ಘಟನೆ ಸಂಭವಿಸುವುದನ್ನು ನಾವು ನೋಡಿದ್ದೇವೆ. 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ತನ್ನ ತಾಯಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ದೀರ್ಘಕಾಲ ವಿಚಾರಣೆ ಎದುರಿಸಿದ ಬಳಿಕ ಕಳೆದ ತಿಂಗಳು ಆರೋಪಿಯನ್ನು ಖುಲಾಸೆಗೊಳಿಸುವುದನ್ನು ನಾವು ನೋಡಿದ್ದೇವೆ. ಸೌದಿ ಅರೇಬಿಯಾದಲ್ಲಿ ಇದು ಸಂಭವಿಸುತ್ತದೆಯೇ? ಅಲ್ಲೇನಾದರೂ ಈ ರೀತಿ ಆಗಿದ್ದರೆ ಅವರನ್ನು ಕೊಂದುಬಿಡುತ್ತಿದ್ದರು. ಇಲ್ಲಿ ಶಿಕ್ಷೆಗೊಳಗಾಗುತ್ತೇವೆ ಎಂಬ ಭಯವಿಲ್ಲ ಮತ್ತು ಈ ಹಿಂದಿನ ಪ್ರಕರಣಗಳು ಕೂಡ ಅಪರಾಧಿಗಳಲ್ಲಿ ಭಯ ಹುಟ್ಟಿಸಿಲ್ಲ.

ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಇಂತಹ ಅಪರಾಧ ನಡೆದಾಗ ಕ್ರಮ ಕೈಗೊಂಡ ದಿವಂಗತ ಮಾಜಿ ಮುಖ್ಯಮಂತ್ರಿ ವೈಎಸ್‌ಆರ್ ಅವರನ್ನು ನಾನು ವಂದಿಸುತ್ತೇನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಇದು ಸೂಕ್ತ ಸಮಯ ಎಂದು ವಿಶಾಲ್​ ಅವರು ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ಸದ್ಯ ವಿಶಾಲ್​ ಅವರು ಮಾಡಿರುವ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕ ನೆಟ್ಟಿಗರ ವಿಶಾಲ್​ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ. ಸರ್ಕಾರಗಳು ಅತ್ಯಾಚಾರ ಪ್ರಕರಣಗಳಲ್ಲಿ ಗಂಭೀರತೆ ಪ್ರದರ್ಶಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ವಿಶಾಲ್​ ಅವರು ಪ್ರಸ್ತುತ ಮಗುಡಮ್​ ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ಮಾಡುತ್ತಿದ್ದಾರೆ. ಅವರೇ ನಿರ್ದೇಶಿಸುತ್ತಿರುವ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net