

ಚೆನ್ನೈ: ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ಸಿದ್ಧತೆಗಳು ಆರಂಭವಾಗಿವೆ. ಮುಂದಿನ ತಿಂಗಳು ಅಂದರೆ, ಡಿಸೆಂಬರ್ನಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದು ಮುಗಿಯುತ್ತಿದ್ದಂತೆ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಲಿದೆ. ಇದೆಲ್ಲದರ ನಡುವೆ ಕ್ರೀಡಾಭಿಮಾನಿಗಳಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್. ಧೋನಿ ( MS Dhoni ) ಈ ಸೀಸನ್ ಆಡುತ್ತಾರಾ ಎಂಬುದು. ಆ, ಪ್ರಶ್ನೆಗೆ ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿಯೇ ಉತ್ತರ ನೀಡಿದ್ದು, 2026ರ ಐಪಿಎಲ್ ಟೂರ್ನಿಯಲ್ಲಿ ತಲಾ ಧೋನಿ ಭಾಗವಹಿಸಲಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದೆ.
ಅಂದಹಾಗೆ, ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಈ ಟೂರ್ನಿಯಲ್ಲಿ ಕೇವಲ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿದೇಶಿ ಆಟಗಾರರು ಸಹ ಆಡಲು ಬಯಸುತ್ತಾರೆ. ಏಕೆಂದರೆ, ಒಳ್ಳೆಯ ಸಂಬಳದೊಂದಿಗೆ ಖ್ಯಾತಿಯೂ ಸಹ ಈ ಟೂರ್ನಿಯಿಂದ ಸಿಗುತ್ತದೆ. ಒಮ್ಮೆ ಈ ಟೂರ್ನಿಯಲ್ಲಿ ಆಡಿದರೆ ಸಾಕು ಅವರ ಜೀವನವೇ ಸೆಟಲ್ ಆಗುತ್ತದೆ. ಇನ್ನು ಸ್ಟಾರ್ ಕ್ರಿಕೆಟಿಗರ ಸಂಭಾವನೆ ಮಾತ್ರ ಕೇಳುವಂತಿಲ್ಲ ಏಕೆಂದರೆ, ಕೋಟಿ ಕೋಟಿಗಳಲ್ಲಿ ಇರುತ್ತದೆ.
ಹೀಗಿರುವಾಗ ಮುಂದಿನ ಸೀಸನ್ನಲ್ಲೂ ಆಡಲಿರುವ ಎಂ.ಎಸ್. ಧೋನಿ ಅವರ ಸಂಭಾವನೆ ಎಷ್ಟಿರಬಹುದು ಅನ್ನೋ ಸದ್ಯಕ್ಕೆ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ. ಅದಕ್ಕೂ ಮುನ್ನ ಧೋನಿ ಅವರ ಐಪಿಎಲ್ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿ ಬರೋಣ. ಧೋನಿ ಅವರು 2008ರಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನವನ್ನು ಸಿಎಸ್‌ಕೆ ತಂಡದಿಂದ ಆರಂಭಿಸಿದರು. ಇದರ ನಡುವೆ ಎರಡು ಸೀಸನ್ಗಳಲ್ಲಿ ರೈಸಿಂಗ್ ಪುಣೆ ಸೂಪರ್ಜೈಂಟ್ (ಆರ್ಪಿಎಸ್) ತಂಡದ ಪರ ಆಡಿದರು. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಸಿಎಸ್‌ಕೆ ತಂಡ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ 2 ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಆಗಿತ್ತು. 2018ರಲ್ಲಿ ಸಿಎಸ್‌ಕೆಗೆ ಮರಳಿದ ಎಂ.ಎಸ್. ಧೋನಿ ಅಂದಿನಿಂದ ಅದೇ ತಂಡದಲ್ಲಿ ಆಡುತ್ತಿದ್ದಾರೆ.
ತಾಜಾ ಸಂಗತಿ ಏನೆಂದರೆ, 2025ರ ಐಪಿಎಲ್ ಮೆಗಾ-ಹರಾಜಿಗೂ ಮೊದಲು, ಧೋನಿ ಅವರು 4 ಕೋಟಿ ರೂ.ಗೆ ಅನ್‌ಕ್ಯಾಪ್ಡ್ ವಿಭಾಗದಲ್ಲಿ ಸಿಎಸ್ಕೆಯಲ್ಲೇ ಉಳಿದುಕೊಳ್ಳುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಬಹುಶಃ ಅವರು ಹರಾಜಿನಲ್ಲಿ ಭಾಗವಹಿಸಿದ್ದರೆ 20 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಗಳಿಸಬಹುದಿತ್ತು. ಆದರೆ, ಸಿಎಸ್‌ಕೆ ಜತೆಗಿನ ಅವರ ಒಡನಾಟದಿಂದಾಗಿ 4 ಕೋಟಿ ರೂ. ಸಂಬಳವನ್ನು ಸ್ವೀಕರಿಸಿ ಅದೇ ತಂಡಕ್ಕೆ ನಿಷ್ಠೆಯಿಂದ ಉಳಿಯಲು ನಿರ್ಧಾರ ಮಾಡಿದರು.
ಆಟಗಾರರಿಗೆ ಸಾಮಾನ್ಯವಾಗಿ 3 ವರ್ಷಗಳ ಒಪ್ಪಂದಗಳನ್ನು ನೀಡಲಾಗುತ್ತದೆ. ಆ ಅವಧಿಯವರೆಗೆ ನಿಗದಿಪಡಿಸಿದ ಸಂಬಳವನ್ನು ನೀಡಲಾಗುತ್ತದೆ. ಆದ್ದರಿಂದ, ಮುಂಬರುವ 19ನೇ ಐಪಿಎಲ್ ಸೀಸನ್ನಲ್ಲಿಯೂ ಧೋನಿ ಅವರಿಗೆ 4 ಕೋಟಿ ರೂ. ಸಿಗಲಿದೆ. ಒಂದು ಕಾಲದಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿದ್ದ ಧೋನಿ, ಈಗ ಲೀಗ್‌ನಲ್ಲಿ ಕಡಿಮೆ ಆದಾಯ ಗಳಿಸುವ ದಿಗ್ಗಜ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿ ಸಿಎಸ್‌ಕೆಗೆ ಧೋನಿ ಅವರ ನಿಷ್ಠೆ ಪ್ರಶ್ನಾತೀತವಾಗಿದೆ ಮತ್ತು ಹಳದಿ ಜೆರ್ಸಿಯನ್ನೇ ಧರಿಸಿ ಐಪಿಎಲ್ನಿಂದ ನಿವೃತ್ತರಾಗುತ್ತಾರೆ ಎಂದು ನಂಬಲಾಗಿದೆ.
2008 ರ ಐಪಿಎಲ್ ಚೊಚ್ಚಲ ಮೆಗಾ-ಹರಾಜಿನಲ್ಲಿ ಧೋನಿ ಸುಮಾರು 6 ಕೋಟಿ ರೂ.ಗಳಿಗೆ ಸಿಎಸ್‌ಕೆ ಸೇರಿದರು. ಅವರ ನಾಯಕತ್ವದಲ್ಲಿ, ಸಿಎಸ್‌ಕೆ ಚೊಚ್ಚಲ ಸೀಸನ್ನಲ್ಲೇ ಫೈನಲ್ ತಲುಪಿತು. ಆದರೆ, ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುಂಡಿತು. 2009ರ ಐಪಿಎಲ್‌ನಲ್ಲಿಯೂ ಅವರು ಎರಡನೇ ಸುತ್ತಿಗೆ ಮುನ್ನಡೆದರು. ಸಿಎಸ್‌ಕೆ 2010 ಮತ್ತು 2011 ರಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದಿತು. ಆದರೆ, 2012 ಮತ್ತು 2013ರ ಫೈನಲ್‌ಗಳಲ್ಲಿ ಕ್ರಮವಾಗಿ ಕೊಲ್ಕತ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಸೋತಿತು. 2015ರ ಫೈನಲ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ವಿರುದ್ಧ ಸೋತರು.
2018ರಲ್ಲಿ ನಡೆದ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವು ವಿಜಯಶಾಲಿಯಾಗಿ ಮರಳಿತು, ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಆದಾಗ್ಯೂ, ಅವರು 2019ರಲ್ಲಿ ಮುಂಬೈ ವಿರುದ್ಧ ಕೇವಲ ಒಂದು ರನ್ನಿಂದ ಸೋಲು ಅನುಭವಿಸಿತು. 2020ರಲ್ಲಿ, ಸಿಎಸ್‌ಕೆ ಲೀಗ್ ಹಂತ ದಾಟುವಲ್ಲಿ ಮೊದಲ ವೈಫಲ್ಯ ಅನುಭವಿಸಿತು. ಐದು ಬಾರಿ ಐಪಿಎಲ್ ಚಾಂಪಿಯನ್‌ಗಳು 2021 ಮತ್ತು 2023 ರಲ್ಲಿ ಮತ್ತೆ ಪ್ರಶಸ್ತಿಗಳನ್ನು ಗೆದ್ದರು. ಆದರೂ 2020 ರಿಂದ ಮೂರು ಬಾರಿ ಲೀಗ್ ಹಂತವನ್ನು ತೆರವುಗೊಳಿಸಲು ಹೆಣಗಾಡಿದ್ದಾರೆ. ಧೋನಿ ಅವರು 221 ಪಂದ್ಯಗಳಲ್ಲಿ ಸಿಎಸ್‌ಕೆಗೆ 131 ಗೆಲುವು ತಂದುಕೊಟ್ಟಿದ್ದಾರೆ. (ಏಜೆನ್ಸೀಸ್)