"ವಿಶ್ವ ಕನ್ನಡಿಗ 2023 ಪ್ರಶಸ್ತಿ" ಸ್ವೀಕರಿಸಿದ ಡಿವೈನ್​ ಸ್ಟಾರ್​ ರಿಷಬ್​​ ಶೆಟ್ಟಿ

Rishab Shetty
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ರಿಷಬ್​​ ಶೆಟ್ಟಿ ತಮ್ಮ ಸಿನಿಮಾ ಮೂಲಕವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಹೊಸ ಪ್ರಯೋಗ, ವಿಭಿನ್ನವಾದ ಕಥಾ ಹಂದರದೊಂದಿಗೆ ಸಿನಿ ಪ್ರೀಯರಿಗೆ ಹತ್ತಿರವಾಗುವ ಈ ನಟ ಕಾಂತಾರ ಸಿನಿಮಾ ನಂತ್ರ ಅತಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕಾಂತಾರ ಬಳಿಕ ನಟ ರಿಷಬ್ ಶೆಟ್ಟಿ ಖ್ಯಾತಿ ಜಗತ್ತಿನಾದ್ಯಂತ ಹರಡಿದೆ. ರಿಷಬ್‌ ಶೆಟ್ಟಿ ಅರಸಿ ಅನೇಕ ಪ್ರಶಸ್ತಿಗಳು ಬರುತ್ತಿವೆ. ಇದೀಗ ಮತ್ತೊಂದು ಪ್ರಶಸ್ತಿ ರಿಷಬ್‌ ಶೆಟ್ಟಿ ಅವರ ಪಾಲಿಗೆ ಒಲಿದು ಬಂದಿದೆ. ನಟ, ನಿರ್ದೇಶಕ ರಿಷಬ್‌ ಶೆಟ್ಟಿಗೆ ಅಮೆರಿಕಾದ ವಾಷಿಂಗ್ಟನ್‌ನಲ್ಲಿ ಸಹ್ಯಾದ್ರಿ ಕನ್ನಡ ಸಂಘದಿಂದ ವಿಶ್ವ ಶ್ರೇಷ್ಠ ಕನ್ನಡಿಗ 2023 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಮೆರಿಕಾದ ವಾಷಿಂಗ್ಟನ್‌ನ ಸಿಯಾಟಲ್​​ನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್​​ನಲ್ಲಿ ರಿಷಬ್ ಶೆಟ್ಟಿ ಅವರಿಗೆ ʻವಿಶ್ವ ಶ್ರೇಷ್ಠ ಕನ್ನಡಿಗ 2023ʼ ಪ್ರಶಸ್ತಿ ನೀಡಿದೆ. ಅಮೆರಿಕಾದಲ್ಲಿ ನೆಲಸಿರುವ ಸಹಸ್ರಾರು ಕನ್ನಡಿಗರ ಮುಂದೆ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸ್ಯಾಂಡಲ್​​ವುಡ್​ ನಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕುರಿತಾಗಿ ನೆಟ್ಟಿಗರು, ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಈ ಕುರಿತಾಗಿ ಟ್ವೀಟ್​​​ ಮಾರಿರುವ ರಿಷಬ್​ ಶೆಟ್ಟಿ, ಹನಿಯೊಳಗೊಂದು ಸಾಗರವೇ ಇರುವಂತೆ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ದೂರದ ಅಮೆರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ, ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿದ್ದಾರೆ. ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಆಭಾರಿ. ಎಂದು ಬರೆದುಕೊಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಸುಮಾರು 400 ರೂ. ಕೋಟಿ ಗಳಿಸಿದೆ ಎನ್ನಲಾಗಿದೆ. ಈ ಸಿನಿಮಾವನ್ನು ಯಶಸ್ಸಿನ ನಂತರ ಕಾಂತಾರ ಮುಂದುವರೆದ ಭಾಗ ಯಾವಾಗ? ತೆರೆಯ ಮೇಲೆ ಬರುತ್ತದೆ ಎನ್ನುವ ಕುತೂಹಲವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net