ಪ್ರೀತಿಯಲ್ಲಿ ನಂಬಿಕೆ ದ್ರೋಹ: ಕೊಚ್ಚಿ ಹೋಯ್ತು ಯುವ ನಟನ ಕನಸು!

ವಿಜಯವಾಣಿ (49) (1)
Published on

ಹೈದರಾಬಾದ್​: ಬಗೆಹರಿಯದ ಲವ್​ ತ್ರಿಕೋನ ಕಥೆ! ಕಳೆದ ಒಂದು ತಿಂಗಳಿಂದ ಟಾಲಿವುಡ್​ನಲ್ಲಿ ದೊಡ್ಡ ವಿವಾದವೊಂದು ಹರಿದಾಡುತ್ತಿದ್ದು, ಇದು ತೆಲುಗು ಚಿತ್ರರಂಗದವರಿಗೆ ಬಗೆಹರಿಯದ ತಲೆನೋವಾಗಿ ಪರಿಣಮಿಸಿದೆ. ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ ಬಗೆದಿರುವ ಯುವನಟ ರಾಜ್ ತರುಣ್​, ವಂಚನೆ ಮಾಡಿ, ಸಹ ನಟಿ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ನಟನ ಪ್ರೇಯಸಿ ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇವರಿಬ್ಬರ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್​, ಕ್ಷಣಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದು, ಅದ್ಯಾಕೋ ನಂಬಿಕೆ ದ್ರೋಹ ಕೇಸ್​ಗೆ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಂಡುಬಂದಂತೆ ಕಾಣುತ್ತಿಲ್ಲ.

ಸದ್ಯದ ಮಟ್ಟಿಗೆ ಬೂದಿ ಮುಚ್ಚಿದ ಕೆಂಡದಂತಿರುವ ರಾಜ್ ತರುಣ್-ಲಾವಣ್ಯ ಪ್ರಕರಣದಲ್ಲಿ ಯಾವಾಗ ಏನು ಸಂಭವಿಸಲಿದೆ? ಯಾರ ಹೇಳಿಕೆ ಸ್ಫೋಟಕವಾಗಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಟಾಲಿವುಡ್​ ಮಂದಿಯನ್ನು ಕಾಡುತ್ತಿದೆ. ಲಾವಣ್ಯ ಹೂಡಿದ್ದ ದೂರಿನ ಮೇರೆಗೆ ಇವರಿಬ್ಬರ ಕೇಸ್​ ಹೈಕೋರ್ಟ್​ ಮೆಟ್ಟಿಲೇರಿತ್ತು. ಇತ್ತೀಚೆಗಷ್ಟೇ ರಾಜ್​ಗೆ ಜಾಮೀನು ನೀಡಿದ ನ್ಯಾಯಾಲಯ, ನಟನಿಗೆ ಕೊಂಚ ರಿಲೀಫ್ ಕೊಟ್ಟಿದೆ. ಇಷ್ಟಾದರೂ ಪ್ರೇಯಸಿ ಲಾವಣ್ಯ ಮಾತ್ರ ತನ್ನ ಹೋರಾಟವನ್ನು ಕೈಬಿಟ್ಟಿಲ್ಲ. ಸದ್ಯ ಭಾರೀ ವಿವಾದದಿಂದ ತಲೆಮರಿಸಿಕೊಂಡಿರುವ ರಾಜ್​ ತರುಣ್​, ಇದೀಗ ತೆಲುಗು ಬಿಗ್ ಬಾಸ್​ ಸೀಸನ್ ​08ಕ್ಕೆ ಎಂಟ್ರಿ ಕೊಡಲಿದ್ದಾರೆ, ಈಗಾಗಲೇ ದೊಡ್ಡ ಆಫರ್​ ಕೂಡ ಪಡೆದಿದ್ದಾರೆ ಎಂಬ ಸುದ್ದಿಯೊಂದು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಪ್ರಾಯಶಃ ಈ ಆಫರ್​ ನಿಜವಾದಲ್ಲಿ, ನಟ ಇದನ್ನು ಒಪ್ಪಿಕೊಂಡರೆ ಖಂಡಿತ ಆತ ತನ್ನ ಮೇಲಿರುವ ಕಳಂಕದಿಂದ ಹೊರಬರಲು ದೊಡ್ಡ ವೇದಿಕೆ ಸಿಕ್ಕಾಂತಾಗಲಿದೆ ಎಂದು ಒಂದಷ್ಟು ಸಿನಿ ಅಭಿಮಾನಿಗಳು ಅಭಿಪ್ರಾಯಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ವಿವಾದದಲ್ಲಿ ಸಿಲುಕಿರುವ ರಾಜ್​ ತರುಣ್​, ರಿಲೀಸ್ ಆದ ತನ್ನ ಎರಡು ಬಹುನಿರೀಕ್ಷಿತ ಚಿತ್ರಗಳಿಗೆ ಉತ್ತಮ ರೀತಿಯಲ್ಲಿ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಕಾಂಟ್ರೋವರ್ಸಿಯಿಂದ ತಲೆಮರೆಸಿಕೊಳ್ಳುವುದೇ ಆಯಿತೇ ವಿನಃ ತಾನು ಅಭಿನಯಿಸಿದ ಸಿನಿಮಾಗಳಿಗೆ ಒಂದು ದಿನದ ಮಟ್ಟಿಗಾದರೂ ಪ್ರಮೋಷನ್ ಮಾಡಲು ಆಗಲಿಲ್ಲ. ಇದು ನಟನಿಗೆ ಭಾರೀ ಬೇಸರ ಉಂಟುಮಾಡಿದೆ.

ಈ ವಿವಾದದ ಮಧ್ಯೆಯೇ ರಾಜ್ ಅಭಿನಯದ 'ತಿರಂಗಭದ್ರಾಸಾಮಿ' ಮತ್ತು 'ನಾ ಸಾಮಿ ರಂಗ' ಎರಡು ಚಿತ್ರಗಳನ್ನು ಬಿಡುಗಡೆಗೊಳಿಸಿದ ನಿರ್ಮಾಪಕರು ಅಂತಿಮವಾಗಿ ಪ್ರೇಕ್ಷಕರಿಲ್ಲದೆ ಚಿತ್ರಮಂದಿರದಿಂದ ಸಿನಿಮಾ ಎತ್ತಂಗಡಿ ಆಗುವುದನ್ನು ನೋಡಿ, ಕಡೆಗೂ ನಷ್ಟದಲ್ಲಿ ಕೈಸುಟ್ಟಿಕೊಂಡರು. ರಾಜ್ ವಿವಾದವನ್ನೇ ಅಸ್ತ್ರವನ್ನಾಗಿಸಿಕೊಳ್ಳುವ ಪ್ರಯತ್ನದಲ್ಲಿ ಮುಗ್ಗರಿಸಿದ ಚಿತ್ರ ತಯಾರಕರು, ಇದೀಗ ಹೀನಾಯ ಸೋಲನ್ನು ನೋಡಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆಯಿಂದ ಯುವ ನಟನ ಸಿನಿ ಭವಿಷ್ಯಕ್ಕೆ ಕೊಂಚ ಪೆಟ್ಟುಬಿದ್ದಿದ್ದು, ಮುಂದಿನ ದಿನಗಳಲ್ಲಿ ಚಿತ್ರಗಳ ಆಫರ್​ ಪಡೆಯಲು ಹೆಣಗಾಡುವಂತ ಪರಿಸ್ಥಿತಿ ಕಾಡುವುದರಲ್ಲಿ ಅನುಮಾನವಿಲ್ಲ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net