ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ಒಳ್ಳೆಯ ಕೆಲಸಕ್ಕಿಂತ ಟೀಕೆಗೆ ಗುರಿಯಾಗಿದ್ದೆ ಹೆದ್ದು ಎಂದರೆ ತಪ್ಪಾಗಲಾರದು. ಏಕೆಂದರೆ ಇತ್ತೀಚಿಗೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ತೀವ್ರ ಟೀಕೆಗೆ ಗುರಿಯಾಗಿರುವ ಪಾಕ್ ಕ್ರಿಕೆಟ್ ತಂಡದ ವಿರುದ್ಧ ಮಾಜಿ ನಾಯಕರು ಕಿಡಿಕಾರುತ್ತಿದ್ದು, ಭಾರತ ತಂಡವನ್ನು ಉದಾಹರಣೆಯಾಗಿ ನೀಡಿ ಮಾತನಾಡುತ್ತಿದ್ದಾರೆ.
ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಸೋಲಿನ ಕುರಿತು ಮಾತನಾಡಿರುವ ಮಾಜಿ ನಾಯಕ ಬಸಿತ್ ಅಲಿ, ಟೆಸ್ಟ್ ಸರಣಿಯ ಬಳಿಕ ನಾವು ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆಸಬೇಕಾಗಿದೆ. ನಮ್ಮವರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡ ಟೆಕ್ನಿಕ್ಗಳನ್ನು ಅನುಸರಿಸುವ ಬದಲು ನೆರೆಯ ರಾಷ್ಟ್ರ ಭಾರತದಲ್ಲಿ ಪಾಲಿಸಲಾಗುವ ಅಂಶವನ್ನು ಕಾಪಿ ಮಾಡಿ. ನಕಲು ಮಾಡುವುದಕ್ಕೂ ಬುದ್ದಿವಂತಿಕೆ ಇರಬೇಕು.
ಭಾರತದವರು ಏನು ಮಾಡುತ್ತಾರೋ ಅದನ್ನು ನಕಲು ಮಾಡಿ. ಇನ್ನೇನು ಕೆಲವೇ ದಿನಗಳಲ್ಲಿ ದುಲೀಪ್ ಟ್ರೋಫಿ ಆರಂಭವಾಗಲಿದೆ. ಇದು ಏಕದಿನ ಅಥವಾ ಟಿ20 ಪಂದ್ಯವಲ್ಲ. ಇದು ಟೆಸ್ಟ್ ಪಂದ್ಯ. ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದವರು ಈ ರೀತಿ ಮಾಡುತ್ತಿದ್ದು, ಅವರು ಕ್ರಿಕೆಟ್ನಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮವರು ಕೂಡ ಇದನ್ನು ಪಾಲಿಸಿದರೆ ಸಾಕು ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.