ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿದ್ದು, ಅವರ ಅಪ್ತರಿಗೂ ಸಂಕಷ್ಟಗಳು ಎದುರಾಗುತ್ತಿದೆ ಎಂದರೆ ತಪ್ಪಾಗಲಾರದು.
ಈ ಹಿಂದೆ ನಟ ದರ್ಶನ್‌ರನ್ನು ಭೇಟಿ ಮಾಡಿದ್ದಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣಗೆ ನೋಟಿಸ್ ನೀಡಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ನಟ ಚಿಕ್ಕಣ್ಣ ಬಳಿಕ ಮಾತನಾಡಿದ್ದು, ಯಾವ ಕಾರಣಕ್ಕೆ ವಿಚಾರಣೆಗೆ ಕರೆಯಲಾಗಿತ್ತು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.
ವಿಚಾರಣೆ ಬಳಿಕ ಮಾತನಾಡಿದ ನಟ ಚಿಕ್ಕಣ್ಣ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಒಬ್ಬ ಸಾಕ್ಷಿದಾರನಾಗಿದ್ದು, ದರ್ಶನ್‌ರನ್ನು ಮಾತನಾಡಿಸಬಾರದೆಂದು ನನಗೆ ಗೊತ್ತಿರಲಿಲ್ಲ. ಹೀಗಾಗಿ ಅಂದು ಪರಪ್ಪನ ಅಗ್ರಹಾರದಲ್ಲಿ ಭೇಟಿ ಮಾಡಿದ್ದೆ. ಈ ಸಂಬಂಧ ಅಧಿಕಾರಿಗಳು ಆಗಸ್ಟ್ 28ರಂದು ನೋಟಿಸ್ ನೀಡಿ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಇದನ್ನೂ ಓದಿ: VIDEO| ಗಿಲ್ ಮುಂದಿನ ಕೊಹ್ಲಿಯಾಗಲು ಸಾಧ್ಯವಿಲ್ಲ; ಶುಭಮನ್ ಕುರಿತು ವಿರಾಟ್ ಹೇಳಿಕೆ ವೈರಲ್
ವಿಚಾರಣೆಯ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರ ಬಗ್ಗೆ ಒಂದಷ್ಟು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೀನಿ. ಮತ್ತೆ ಅವರು ವಿಚಾರಣೆಗೆ ಕರೆದರೆ ಬರುತ್ತೇನೆ. ಸದ್ಯ ವಿಚಾರಣೆಗೆ ಬರುವುದಕ್ಕೆ ಹೇಳಿಲ್ಲ. ಸಾಕ್ಷಿದಾರ ಹೋಗಬಾರದು ಅನ್ನೋದು ನನಗೆ ತಿಳಿದಿರಲಿಲ್ಲ. ಗೊತ್ತಿದ್ದರೆ ಹೋಗಿ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಆಗುತ್ತಿರಲಿಲ್ಲ ಎಂದು ನಟ ಚಿಕ್ಕಣ್ಣ ಹೇಳಿದ್ದಾರೆ.
ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ನಟ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತಿರಸಲಾಗಿದ್ದು, ಉಳಿದ ಆರೋಪಿಗಳನ್ನು ತುಮಕೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಮೈಸೂರಿಗೆ ಸ್ಥಳಾಂತರಿಸಲಾಗಿದೆ.