VIDEO| ಗಿಲ್ ಮುಂದಿನ ಕೊಹ್ಲಿಯಾಗಲು ಸಾಧ್ಯವಿಲ್ಲ; ಶುಭಮನ್​ ಕುರಿತು ವಿರಾಟ್ ಹೇಳಿಕೆ ವೈರಲ್​

Virat Gill
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಡೀಪ್​​​​​ಫೇಕ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ತಂತ್ರಜ್ಞಾನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬರೀ ಸಿನಿಮಾ ಹಾಗೂ ಸೋಶಿಯಲ್​ ಮೀಡಿಯಾ ಸೆಲೆಬ್ರಿಟಿಗಳಿಗೆ ಸೀಮಿತವಾಗಿದ್ದ ಡೀಪ್​ಫೇಕ್​ ತಂತ್ರಜ್ಞಾನವು ಇದೀಗ ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಿದ್ದು, ವಿರಾಟ್​ ಕೊಹ್ಲಿ ಹಾಗೂ ಶುಭಮನ್​ ಗಿಲ್​ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ತಮ್ಮ ಬಗ್ಗೆ ಮಾತನಾಡಿಕೊಂಡಿದ್ದು, ಶುಭಮನ್​ ಗಿಲ್​ರನ್ನು ನಿಂದಿಸಿದ್ದಾರೆ. ನಾನು ಗಿಲ್ ಅವರನ್ನು ನೋಡುತ್ತಿದ್ದೇನೆ. ಗಿಲ್ ಖಂಡಿತವಾಗಿಯೂ ಪ್ರತಿಭಾವಂತ ಆಟಗಾರ. ಆದರೆ ಭವಿಷ್ಯದ ಆಟಗಾರನಾಗಿ ಭರವಸೆಯನ್ನು ತೋರಿಸುವುದಕ್ಕೂ ಮತ್ತು ದಂತಕಥೆಯಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಗಿಲ್ ಮುಂದಿನ ವಿರಾಟ್ ಕೊಹ್ಲಿಯಾಗಲು ಸಾಧ್ಯವಿಲ್ಲ ಎಂದು ವಿರಾಟ್​ ವಿಡಿಯೋದಲ್ಲಿ ಹೇಳಿರುವುದನ್ನು ನೋಡಬಹುದಾಗಿದೆ.

ಇದನ್ನು ನೋಡುವುದಾದರೆ ಕೊಹ್ಲಿ ತಮ್ಮ ಬಗ್ಗೆ ಹೆಚ್ಚು ಮಾತನಾಡಿದ್ದು, ಶುಭಮನ್​ ಗಿಲ್ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವುದನ್ನು ನೋಡಬಹುದಾಗಿದೆ. ಆರಂಭದಲ್ಲಿ ಇದು ನಿಜ ಎಂದು ಎಲ್ಲರೂ ನಂಬಿದರಾದರೂ ಆ ನಂತರ ಇದು ಡೀಪ್​ಫೇಕ್​ ಬಳಸಿ ಮಾಡಲಾಗಿರುವ ವಿಡಿಯೋ ಎಂದು ತಿಳಿದು ಜನ ಕಿಡಿಕಾರಿದ್ದಾರೆ. ಈ ಸಂಬಂಧ ಹಲವರು ಈ ರೀತಿಯ ಫೇಕ್​ ವಿಡಿಯೋಗಳನ್ನು ಮಾಡಿ ಹರಿಬಿಟ್ಟವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net