IPL 2025| LSG ತಂಡದ ಮೆಂಟರ್​ ಆಗಿ ಜಹೀರ್​ ಖಾನ್​ ನೇಮಕ

Zaheer Khan
Published on

ಕಲ್ಕತ್ತಾ: 18ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೆ ತಿಂಗಳುಗಳ ಬಾಕಿ ಉಳಿದಿದ್ದು, ತಂಡಗಳ ಈಗಾಗಲೇ ಭರ್ಜರಿ ಸಿದ್ಧತೆಯಲ್ಲಿ ಬ್ಯುಸಿಯಾಗಿವೆ. ಇದೀಗ ಲಖನೌ ಸೂಪರ್​ಜೈಂಟ್ಸ್​ ತಂಡವು ಜಹೀರ್​ ಖಾನ್​ರನ್ನು ಮೆಂಟರ್​ ಆಗಿ ನೇಮಿಸಿದೆ. ಈ ಕುರಿತು ಲಖನೌ ಮಾಲೀಕರಾದ ಸಂಜೀವ್​ ಗೋಯೆಂಕಾ ಅವರು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ವರ್ಗದಲ್ಲಿ ಕಾಣಿಸಿಕೊಂಡಿದ್ದ ಜಹೀರ್​ ಖಾನ್​ ಇದೀಗ ಹೊಸ ಹುದ್ದೆಯೊಂದಿಗೆ ಐಪಿಎಲ್​ಗೆ ಮರಳುತ್ತಿರುವುದು ಮತ್ತಷ್ಟು ವಿಶೇಷವಾಗಿದೆ. 2018 ರಿಂದ 2022ರವರೆಗೆ ಮುಂಬೈ ಇಂಡಿಯನ್ಸ್​ ತಂಡದ ನಿರ್ದೇಶಕರಾಗಿ, ಗ್ಲೋಬಲ್​ ಹೆಡ್​ ಆಗಿ ಕಾರ್ಯನಿರ್ವಹಿಸಿದ್ದರು. ಇದರ ನಡುವೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾಣಿಸಿಕೊಂಡಿದ್ದರು.

17ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೂ ಮುನ್ನ ಟೀಮ್​ ಇಂಡಿಯಾದ ನೂತನ ಕೋಚ್​ ಗೌತಮ್​ ಗಂಭೀರ್​ ಅವರಿಂದ ತೆರವಾದ ಸ್ಥಾನಕ್ಕೆ ಜಹೀರ್​ರನ್ನು ನೇಮಿಸಲಾಗಿದ್ದು, ಜಹೀರ್​ ಮೂಲಕ ಎರಡು ಹುದ್ದೆಗಳನ್ನು ಭರ್ತಿ ಮಾಡಲು ಲಖನೌ ಫ್ರಾಂಚೈಸಿ ಮುಂದಾಗಿದೆ. ಎಲ್​ಎಸ್​ಜಿ ತಂಡದ ಬೌಲಿಂಗ್​ ಕೋಚ್​ ಆಗಿ ಜಹೀರ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ಮಾಹಿತಿ ಇನ್ನಷ್ಟೇ ಅಧಿಕೃತವಾಗಬೇಕಿದೆ.

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಿರುವ ಜಹೀರ್ ಟೀಮ್​ ಇಂಡಿಯಾದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 100 ಪಂದ್ಯಗಳನ್ನಾಡಿರುವ ಅವರು ಒಟ್ಟು 102 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net