

ಬೆಂಗಳೂರು: ಮಲೇಷಿಯಾ 'ಎಂಎಚ್ 370' ವಿಮಾನದ ಹೆಸರು ಕೇಳಿದರೆ ಸಾಕು ಇಂದಿಗೂ ಅನೇಕರ ತಲೆಯಲ್ಲಿ ಉತ್ತರ ಸಿಗದ ಪ್ರಶ್ನೆಯೊಂದು ಥಟ್ ಎಂದು ಮರುಕಳಿಸುತ್ತದೆ. ನಾಪತ್ತೆಯಾದ ಅದೆಷ್ಟೋ ಸಂಖ್ಯೆಯ ವಿಮಾನಗಳ ಪೈಕಿ ಎಂಎಚ್ 370 ಮಾತ್ರ ಇಂದಿಗೂ ಕಗ್ಗಂಟಾಗಿಯೇ ಉಳಿದಿದೆ. ಬರ್ಮುಡಾ ತ್ರಿಕೋನದ ಸಮೀಪ ಹೋದ ಯಾವುದೇ ಹಡಗು ಅಥವಾ ವಿಮಾನಗಳೇ ಆಗಲಿ ಪತ್ತೆಯಾಗಿದ್ದು ಇತಿಹಾಸದಲ್ಲಿಯೇ ಇಲ್ಲ ಎಂಬ ವಿಚಾರ ಪ್ರತಿಯೊಬ್ಬರಿಗೂ ಗೊತ್ತಿದೆ. ಆದ್ರೆ, ಇದೇ ಮೊದಲ ಬಾರಿಗೆ ಮಲೇಷಿಯಾ ವಿಮಾನವೊಂದು ರೇಡರ್ಗೆ ಸಿಗದಂತೆ ಕಾಣೆಯಾಗಿದ್ದು ನಿಜಕ್ಕೂ ಇಡೀ ಜಗತ್ತಿಗೆ ಅಚ್ಚರಿ ಮೂಡಿಸಿದೆ. ಅಸಲಿಗೆ ಈ ವಿಮಾನ ಕಣ್ಮರೆಯಾಗಿ ಈ ವರ್ಷದ ಮಾರ್ಚ್ 08ಕ್ಕೆ ಹತ್ತು ವರ್ಷ ತುಂಬಿದೆ.
ಇದನ್ನೂ ಓದಿ: ಪಿಕೆಪಿಎಸ್ ಸಿಎಸ್ಸಿಗಳಾಗಿ ಪರಿವರ್ತನೆ
ಇಂದಿಗೂ ಇದರ ಸುಳಿವು ಪತ್ತೆಹಚ್ಚಲಾಗದ ರಹಸ್ಯವಾಗಿಯೇ ಉಳಿದು ಹೋಗಿದೆ. ವಿಮಾನ ನಾಪತ್ತೆ ಹಿಂದಿರುವ ಅಸಲಿ ಕಾರಣವೇನು ಎಂಬುದನ್ನು ಭೇದಿಸಲು ಇಲ್ಲಿಯವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಆಕಾಶ, ಕಡಲಾಳ ಸೇರಿದಂತೆ ಶೋಧ ಕೈಗೊಳ್ಳದ ಜಾಗವೇ ಇಲ್ಲ. ಆದರೆ, ಫಲಿತಾಂಶ ಮಾತ್ರ ಶೂನ್ಯ. ವಿಮಾನಯಾನ ಕ್ಷೇತ್ರ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ‘ಕಣ್ಮರೆ ಕಥೆ’ಗೆ ಹುಟ್ಟಿಕೊಂಡಿದ್ದು ಬರೀ ರೆಕ್ಕೆಪುಕ್ಕಗಳು. ತಾರ್ಕಿಕ ಅಂತ್ಯ ಯಾರಿಂದಲೂ ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ವಿಶ್ವದ ದಿಗ್ಗಜ ತಂತ್ರಜ್ಞಾನ ಸಂಸ್ಥೆಗಳು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ.
2014ರ ಮಾರ್ಚ್ 08ರಂದು ಕೌಲಾಲಂಪುರನಿಂದ ಚೀನಾದ ಬೀಜಿಂಗ್ಗೆ ಹೊರಟಿದ್ದ ಮಲೇಷಿಯಾ ಏರ್ಲೈನ್ಸ್ 370 ವಿಮಾನದ ಕಾಕ್ಪಿಟ್ನಿಂದ ಕೇಳಿ ಬಂದ ಕೊನೆಯ ಶಬ್ದಗಳಿವು. 2014, ಮಾರ್ಚ್ 8ರ ತಡರಾತ್ರಿ ವಿಮಾನ ಶುಭ್ರ ಆಕಾಶಕ್ಕೆ ಹಾರಿ ಒಂದು ಗಂಟೆಯಾಗಿತ್ತು. ಪ್ರಯಾಣಿಕರು ಬಹುಶಃ ನಿದ್ರೆಗೆ ಜಾರಿದ್ದರು ಅನಿಸುತ್ತದೆ. ಆಗ ಈ ಬೃಹತ್ ವಿಮಾನ, ರೇಡಾರ್ ಪರದೆಯಿಂದ ದಿಢೀರ್ ಕಣ್ಮರೆಯಾಗಿತ್ತು. ಎಂಎಚ್-370 ಸಣ್ಣ ವಿಮಾನವೇನಲ್ಲ. ಅದು ಬೋಯಿಂಗ್ 777 ಜೆಟ್. ಐದು ಅಂತಸ್ತಿನ ಕಟ್ಟಡಕ್ಕಿಂತ ಎತ್ತರವಾಗಿರುವ ಈ ವಿಮಾನದಲ್ಲಿ ಬರೋಬ್ಬರಿ 239 ಮಂದಿ ಪ್ರಯಾಣಿಸುತ್ತಿದ್ದರು. ಇವರ ಪೈಕಿ ಐವರು ಭಾರತೀಯರು ಇದ್ದರು. ಇದೊಂದು ವಿಮಾನಕ್ಕಾಗಿ ಮಲೇಷಿಯಾ ಸರ್ಕಾರ ಶೋಧಿಸದ ಜಾಗಗಳೇ ಇಲ್ಲ. ಇದೀಗ ನಾಪತ್ತೆಯಾಗಿರುವ MH370 ವಿಮಾನ ಎಲ್ಲಿ ಅಡಗಿದೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ ಎಂದು ಆಸ್ಟ್ರೇಲಿಯಾದ ವಿಜ್ಞಾನಿಯೊಬ್ಬರ ವರದಿ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ಇದನ್ನೂ ಓದಿ: ಗುಜರಾತ್ ಮಳೆ: ಮನೆ ಮೇಲೇರಿ ಕುಳಿತ ಮೊಸಳೆ!
ಯಾರಿಂದಲೂ ಸಾಧ್ಯವಾಗದ ಕೆಲಸ ಈಗ ಟ್ಯಾಸ್ಮೆನಿಯಾದ ಸಂಶೋಧಕ ವಿನ್ಸೆಂಟ್ ಲೈನ್ ಅವರಿಂದ ಈಡೇರಿದೆ ಎಂಬ ವಿಷಯ ಸದ್ಯ ಅನೇಕರಲ್ಲಿ ಭಾರೀ ಅನುಮಾನ ಹುಟ್ಟಿಸಿದೆ. ಅಸಲಿಗೆ ಆತ ಹೇಳಿರುವುದೇನು? ಪತ್ತೆ ಹಚ್ಚಿದ್ದಾದರೂ ಹೇಗೆ? ಎಂಬುದಕ್ಕೆ ಹೀಗಿದೆ ವಿವರ. ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ವಿವರವಾಗಿ ಮಾಹಿತಿ ಹಂಚಿಕೊಂಡಿರುವ ಲೈನ್, "ವಿಮಾನ ಹಿಂದೂ ಮಹಾಸಾಗರದ 20,000 ಅಡಿ ಆಳದ ರಂಧ್ರದಲ್ಲಿ ಅಡಗಿದೆ. ಇಲ್ಲಿ ಇಂಧನ ಖಾಲಿಯಾಗಿದೆ ಎಂಬ ವಿಷಯವನ್ನು ನಾನು ನಂಬುವುದಿಲ್ಲ. ಬದಲಿಗೆ ಇಲ್ಲಿ ಪೈಲೆಟ್ ತನ್ನ ಚಾಕ್ಷಣತನ್ನವನ್ನು ಪ್ರದರ್ಶಿಸಲು ಹೋಗಿ ಎಡವಿದ್ದಾರೆ ಎಂದು ಹೇಳಲು ಬಯಸುವೆ" ಎಂದಿದ್ದಾರೆ.
ಲಿಂಕ್ಡ್ ಇನ್ ಖಾತೆ: https://www.linkedin.com/pulse/mystery-mh370-solved-science-vincent-lyne-46s3c?trk=public_post_embed_feed-article-content
"ನನಗೆ ಈಗ ಸಮಾಧಾನವಾಗಿದೆ. ವಿಮಾನದಲ್ಲಿ ಕಾಣೆಯಾದ ಸಂತ್ರಸ್ತರ ಸಂಬಂಧಿಕರಿಗೆ ಈಗ ಅವರು ಎಲ್ಲಿದ್ದಾರೆ ಎಂಬುದು ತಿಳಿದಿದೆ. ಮುಂದೆ ಭವಿಷ್ಯದಲ್ಲಿ 370 ಕಾಣೆಯಾಗಿರುವ ಬಗೆಗಿನ ಈ ಪರ್ಯಾಯ ವ್ಯಾಖ್ಯಾನವನ್ನು ಒಪ್ಪಿ ಇದು ಪೂರ್ವನಿಯೋಜಿತ ಎಂದು ನಂಬುತ್ತಾರೆ. ಆದ್ರೆ, ಇಂತಹ ಪ್ರಕರಣವನ್ನು ಪ್ಲ್ಯಾನ್ ಮಾಡಿ, ಕಾರ್ಯರೂಪಕ್ಕೆ ತಂದಿರುವುದು ನಂಬಲು ಕಷ್ಟಸಾಧ್ಯ" ಎಂದು ಲೈನ್ ಭಾವಿಸಿದ್ದಾರೆ. ಅಸಲಿಗೆ ವಿನ್ಸೆಂಟ್ ನೀಡಿರುವ ಈ ಹೇಳಿಕೆಗಳು ಭಾರೀ ಅಚ್ಚರಿ ಮೂಡಿಸಿದ್ದೇ ಆದರೂ ಯಾವುದನ್ನು ನಂಬಬೇಕು? ಬಿಡಬೇಕು ಎಂಬ ಗೊಂದಲ ಕಾಡುವುದಂತು ಅಕ್ಷರಶಃ ಸತ್ಯ ಎಂದೇ ಹೇಳಬಹುದು,(ಏಜೆನ್ಸೀಸ್).