ಪುನೀತ್​ ರಾಜ್​ಕುಮಾರ್​ ಜನ್ಮದಿನ; ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದ ಅಪ್ಪು ಫ್ಯಾನ್ಸ್​

Puneeth Rajkumar
Published on

ಬೆಂಗಳೂರು: ಕರ್ನಾಟಕ ರತ್ನ, ಪವರ್​ಸ್ಟಾರ್​ ಡಾ. ಪುನೀತ್​ ರಾಜ್​ಕುಮಾರ್​ ಅವರಿಗೆ ಇಂದು (ಮಾರ್ಚ್​ 17) ಜನ್ಮದಿನದ ಸಂಭ್ರಮ. ಅಪ್ಪು ನಮ್ಮನ್ನು ದೈಹಿಕವಾಗಿ ಅಗಲಿದ್ದರು ಮಾನಸಿಕವಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಪುನೀತ್​ ರಾಜ್​ಕುಮಾರ್ ಅವರನ್ನು ಅವರ ಅಭಿಮಾನಿಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಆರಾಧಿಸುತ್ತಾರೆ. ರಾಜ್ಯ, ದೇಶ, ವಿದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅವರನ್ನು ಜನ ಸ್ಮರಿಸಿಕೊಳ್ಳುತ್ತಾರೆ.

ಅಪ್ಪು ಇಲ್ಲದೇ ಇದ್ದರೂ ಅವರ ಅಭಿಮಾನಿಗಳು ಅದ್ದೂರಿಯಾಗಿ ಪುನೀತ್ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಅವರ ಹೆಸರಲ್ಲಿ ಇಂದು ಸಾಕಷ್ಟು ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಕಂಠೀರವ ಸ್ಟುಡಿಯೋಯನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದ್ದು, ರಾಜ್ಯದ ಮೂಲೆಮೂಲೆಗಳಿಂದ ಅಬಿಮಾನಿಗಳು ಸಾಗರೋಪಾದಿಯಲ್ಲಿ ನೆಚ್ಚಿನ ನಟನನ್ನು ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಅಪ್ಪು ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಿದ್ದು, ನೆಚ್ಚಿನ ನಟನಿಗೆ ಪ್ರಿಯವಾದ ಬಿರಿಯಾನಿಯನ್ನು ಹಂಚಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸ್ಟಾರ್​ ನಟರ ಜನ್ಮದಿನದ ಪ್ರಯುಕ್ತ CDP (Common Display Picture) ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ ಅಪ್ಪು ಜನುಮದಿನದ ಅಂಗವಾಗಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ CDPಯನ್ನು ಬಿಡುಗಡೆ ಮಾಡಿದ್ದು, ಅಪ್ಪು ಜನ್ಮದಿನವನ್ನು ಸ್ಪೂರ್ತಿ ದಿನವಾಗಿ ಆಚರಿಸಲಾಗ್ತಿದೆ. ಹಸಿರಿನ ಬನದಲ್ಲಿ ನಗು ಮುಖದ ಪುನೀತ್ ಚಿತ್ರ ಈ ಕಾಮನ್ ಡಿಪಿಯಲ್ಲಿದೆ.

ತಾನು ಮಾಡಿದ ಸಮಾಜ ಸೇವೆ, ದಾನ-ಧರ್ಮಗಳ ಮೂಲಕ ಪುನೀತ್​ ಹೆಸರು ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿಸಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಘೋಷ ವಾಕ್ಯ ಕಾಮನ್ ಡಿಪಿಯಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಡಿಪಿ ವೈರಲ್ ಆಗಿದ್ದು, ಗಣ್ಯರು ಹಾಗೂ ಅಭಿಮಾನಿಗಳು ಈ ಡಿಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net