ಬೆಂಗಾಲ್​ ಟೈಗರ್ಸ್​ ವಿರುದ್ಧ ಭರ್ಜರಿ ಜಯ; ಫಿನಾಲೆಗೆ ಲಗ್ಗೆ ಇಟ್ಟ ಕರ್ನಾಟಕ ಬುಲ್ಡೋಜರ್ಸ್

CCL
Published on

ತಿರುವನಂತಪುರ: ಮಾರ್ಚ್​ 15ರಂದು ಕನ್ನಡಿಗರ ಪಾಲಿಗೆ ಡಬಲ್​ ಧಮಾಕ ಎಂದು ಹೇಳಬಹುದಾಗಿದೆ. ಏಕೆಂದರೆ ಆರ್​ಸಿಬಿ ವನಿತೆಯರು ವುಮೆನ್ಸ್​​ ಪ್ರೀಮಿಯರ್ ಲೀಗ್​ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಸೆಲಿಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಫೈನಲ್ ತಲುಪಿದೆ.

ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಬೆಂಗಾಲ್ ಟೈಗರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಬೆಂಗಾಲ್ ಟೈಗರ್ಸ್ 86ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಈ ಸಣ್ಣ ಮೊತ್ತವನ್ನು ಬೆನ್ನತ್ತಿದ ಸುದೀಪ್ ಪಡೆ 4 ವಿಕೆಟ್​ ನಷ್ಟಕ್ಕೆ 114 ರನ್​ ಗಳಿಸಿ 28ರನ್​ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್​ನಲ್ಲಿ ಬೆಂಗಾಲ್ ಟೈಗರ್ಸ್ 6 ವಿಕೆಟ್​ ನಷ್ಟಕ್ಕೆ 127 ರನ್​ ಪೇರಿಸಿತ್ತು. 100ರನ್​ಗಳ ಗುರಿ ಪಡೆದ ಕರ್ನಾಟಕ 2 ವಿಕೆಟ್​ ನಷ್ಟಕ್ಕೆ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೆ ಗುರಿ ತಲುಪಿ ಗೆಲುವಿನ ನಗೆ ಬೀರಿತ್ತು.

ಈ ಮೊದಲು 2013 ಹಾಗೂ 2014ರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಂ ಸಿಸಿಎಲ್ ಟ್ರೋಫಿ ಗೆದ್ದಿತ್ತು. ಈಗ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿದೆ. ಮಾರ್ಚ್​ 17ರಂದು ನಡೆಯುವ ಫಿನಾಲೆಯಲ್ಲಿ ಯಾವ ತಂಡ ಕರ್ನಾಟಕದ ಎದುರು ಆಡಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net