

ಬೆಂಗಳೂರು: ಡಿ. 25ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ರಾಜ್ಯದ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವೇಳೆ ಚಿತ್ರದ ಉತ್ತಮ ಓಪನಿಂಗ್ಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚನ ಅಭಿಮಾನಿ ಬಳಗ, ಕೇಕ್ ಮೇಲೆ ಬಾಸಿಸಂ ಕಾಲ ಮುಗಿತು, ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯಿತು ಎಂದು ಪರೋಕ್ಷವಾಗಿ ದರ್ಶನ್ಗೆ ಟಾಂಗ್ ಕೊಡುವಂತೆ ಬರೆಸಿ, ಸಂಭ್ರಮಿಸಿದ್ದರು. ಸದ್ಯ ಇದು ದರ್ಶನ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.
'ಮ್ಯಾಕ್ಸ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಈ ಹೆಸರಿನ ಕೇಕ್ ಕತ್ತರಿಸಿದ್ದ ಸುದೀಪ್ ಮತ್ತು ಅಭಿಮಾನಿ ಬಳಗದ ವಿರುದ್ಧ ಜಾಲತಾಣಗಳಲ್ಲಿ ಕಿಡಿಕಾರಿರುವ ದರ್ಶನ್ ಅಭಿಮಾನಿಗಳು, ಪ್ರತ್ಯೇಕವಾಗಿ ಈ ಸಾಲನ್ನು ದರ್ಶನ್ ಅವರಿಗೆ ಹೇಳಿರುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಾಲು ದರ್ಶನ್ ಬಗ್ಗೆ ಅಂತ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಕಿಡಿಕಾರಿದ ಬೆನ್ನಲ್ಲೇ ಚಿತ್ರನಟ ಪ್ರದೀಪ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
"ಅಸಲಿಗೆ ಕೇಕ್ ಮೇಲೆ ಬರೆಸಿದ ಸಾಲು ದರ್ಶನ್ ಅವರ ವಿರುದ್ಧವಲ್ಲ. 'ಬಾಸಿಸಂ ಕಾಲ ಮುಗೀತು, ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯಿತು' ಎಂಬುದು ಮ್ಯಾಕ್ಸ್ ಸಿನಿಮಾದ ಒಂದು ಹಾಡಿನ ಸಾಲಾಗಿದೆ. ಇಲ್ಲಿ ಯಾವ ನಟರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಬರೆದ ಸಾಲು ಇದಲ್ಲ. ಸುದೀಪ್ ಅವರ ಮನೆಗೆ ಶುಭಕೋರಲು ಕೇಕ್ ತೆಗೆದುಕೊಂಡು ಹೋಗಿದ್ದೆವು. ಇದನ್ನು ತಿರುಚಿ ಯಾರೋ ಒಬ್ಬ ನಟನನ್ನು ಲಿಂಕ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಕೇಕ್ ಮೇಲಿನ ಸಾಲು ಮ್ಯಾಕ್ಸ್ ಚಿತ್ರದ ಹಾಡಿನ ಸಾಲು ಅಷ್ಟೇ" ಎಂದು ಪ್ರದೀಪ್ ಸ್ಪಷ್ಟಪಡಿಸಿದ್ದಾರೆ.