ಆನೆ ಬಂತೊಂದಾನೆ... ರೋಬಾಟಿಕ್ ಆನೆ; ಧಾರ್ಮಿಕ ಉತ್ಸವಗಳ ಬಳಕೆಗೆ 'ಪೇಟಾ' ಪ್ಲಾನ್

elep
Published on

ಪ್ರಶಾಂತ ರಿಪ್ಪನ್​ಪೇಟೆ,ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ಉತ್ಸವಗಳಿಗೆ ಪ್ರಾಣಿಗಳನ್ನು ಬಳಸುವ ಪದ್ಧತಿ ಪುರಾತನವಾದದ್ದು. ಆದರೆ ಧಾರ್ಮಿಕ ಪರಂಪರೆ ಹಾಗು ವನ್ಯಜೀವಿ ಕಾನೂನಿನ ನಡುವೆ ಆಚರಣೆಗಳನ್ನು ಅನುಷ್ಠಾನಗೊಳಿಸಲು ಕೆಲವು ತಾಂತ್ರಿಕ ಅಡಚಣೆಗಳಿವೆ. ಅಂತಹ ಅಡಚಣೆಗಳನ್ನು ನಿವಾರಿಸಿ ಧಾರ್ಮಿಕ ಪರಂಪರೆಯನ್ನು ಅನಾಯಾಸವಾಗಿ ನಡೆಸಲು ಪೇಟಾ ಸಂಸ್ಥೆ ಹೊಸ ಸೂತ್ರವೊಂದನ್ನು ಕಂಡು ಹಿಡಿದಿದೆ. ಧಾರ್ಮಿಕ ಕೇಂದ್ರಗಳಲ್ಲಿ ಬಹಳ ಹಿಂದಿನಿಂದಲೂ ಉತ್ಸವಗಳಲ್ಲಿ ವಿವಿಧ ಪ್ರಾಣಿಗಳನ್ನು ಬಳಕೆ ಮಾಡುವ ಪದ್ಧತಿಯಿದ್ದು, ಆನೆಗಳ ಬಳಕೆಗೆ ವಿಶೇಷ ಸ್ಥಾನವಿದೆ. ಆದರೆ ಆನೆ ಒಂದು ವನ್ಯಜೀವಿಯಾಗಿರುವುದರಿಂದ ಆನೆಯ ಬಳಕೆಗೆ ಅರಣ್ಯ ಇಲಾಖೆಯ ನಿರ್ದಿಷ್ಠ ಮಾರ್ಗಸೂಚಿಯಿದ್ದು, ಆ ಪ್ರಕಾರ ಆನೆಯನ್ನು ಬಳಸಬೇಕು. ಧಾರ್ಮಿಕ ಪರಂಪರೆ, ವನ್ಯಜೀವಿ ಸರಂಕ್ಷಣೆ ಎರಡಕ್ಕೂ ಪೂರಕವೆಂಬಂತೆ ಮ್ಯಾಕ್ಯಾನಿಕಲ್ ಆನೆ ಬಳಕೆಯ ಸೂತ್ರವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಫಾರ್ ಅನಿಮಲ್ (ಪೇಟಾ) ಮತ್ತು ಕಂಪ್ಯಾಶನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕೂಪ) ಯಶಸ್ವಿಯಾಗಿವೆ. ಉತ್ಸವದಲ್ಲಿ ಆನೆಯನ್ನು ಬಳಸುವುದಕ್ಕೂ ಇಲಾಖೆಯ ಅನುಮತಿ ಕಡ್ಡಾಯ. ಆದರೆ ಕೆಲ ಧಾರ್ಮಿಕ ಸಂಸ್ಥೆಗಳು ಶಾಶ್ವತವಾಗಿ ಆನೆಯನ್ನು ಸಾಕುತ್ತಿದ್ದು, ಅಂತಹ ಸಂಸ್ಥೆಗಳು ಕೂಡ ಆನೆ ಸಾಕಾಣಿಕೆ ಮತ್ತು ಬಳಕೆಗೆ ಕಡ್ಡಾಯವಾಗಿ ಮಾರ್ಗಸೂಚಿ ಅನುಸರಿಸಬೇಕು.

ಆನೆ ಸಾಕಾಣಿಕೆ ಇಳಿಮುಖ:

ರಾಜ್ಯದಲ್ಲಿ ಸದ್ಯ 20 ರಿಂದ 23 ಧಾರ್ಮಿಕ ಸಂಸ್ಥೆಗಳು ಆನೆಯನ್ನು ಸ್ವಂತವಾಗಿ ಸಾಕುತ್ತಿವೆ. ಆನೆ ಸಾಕುವುದು ಅಷ್ಟು ಸುಲಭವಲ್ಲ. ಆನೆಗಳನ್ನು ತಿರುಗಾಡಿಸಲು ಸಾಕಷ್ಟು ಜಾಗವಿರಬೇಕು. ಆನೆಗಳ ಆಹಾರ, ಆರೈಕೆ, ಆರೋಗ್ಯ ಹಾಗೂ ಅವುಗಳನ್ನು ಸಾಕುವುದಕ್ಕೆ ಬೇಕಾದಷ್ಟು ಆದಾಯ ಎಲ್ಲವೂ ಮುಖ್ಯ. ಈ ಮಧ್ಯೆ ಅವುಗಳನ್ನು ವಾಣಿಜ್ಯೋದ್ದೇಶ, ಹಿಂಸಾತ್ಮಕ ಚಟುವಟಿಕೆ ಮತ್ತು ಬಿಕ್ಷಾಟನೆಗೆ ಬಳಕೆ ಮಾಡುವಂತಿಲ್ಲ. ಈ ಎಲ್ಲ ಕಾರಣಗಳಿಂದ ಈ ಹಿಂದೆ ಬಹಳ ಸಂಖ್ಯೆಯಲ್ಲಿ ಆನೆಗಳನ್ನು ಸಾಕುತ್ತಿದ್ದ ಧಾರ್ಮಿಕ ಸಂಸ್ಥೆಗಳ ಸಂಖ್ಯೆ ಇತ್ತೀಚೆಗೆ ಭಾರಿ ಸಂಖ್ಯೆಯಲ್ಲಿ ಕಡಿಮೆಯಾಗಿವೆ. ಅಂತಹ ಧಾರ್ಮಿಕ ಕೇಂದ್ರಗಳಿಗೆ ಪೇಟಾ ಸಂಸ್ಥೆ ರೋಬಾಟಿಕ್ ಆನೆಯನ್ನು ನೀಡುತ್ತಿರುವುದು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಸಂಸ್ಥೆ ಉತ್ಸವಕ್ಕೆ ಕೂಡ ಉಚಿತವಾಗಿ ರೋಬಾಟಿಕ್ ಆನೆಯನ್ನು ನೀಡುತ್ತಿದ್ದು, ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಳ್ಳಬಹುದು.

ರೋಬಾಟಿಕ್ ಆನೆಯ ವಿಶೇಷತೆ:

ಅತಿಹೆಚ್ಚು ಆನೆಗಳನ್ನು ಬಳಸುವ ಕೇರಳ, ರಾಜಸ್ಥಾನ ಹಾಗೂ ಕರ್ನಾಟಕ ಒಳಗೊಂಡು ದೇಶದಲ್ಲಿ 6 ರೋಬಾಟಿಕ್ ಆನೆಗಳನ್ನು ದೇಣಿಗೆ ರೂಪದಲ್ಲಿ ನೀಡಿರುವ ಪೇಟಾ ಸಂಸ್ಥೆಗೆ ಬಾಲಿವುಡ್ ನಟ-ನಟಿಯರು, ವಿವಿಧ ಕ್ಷೇತ್ರದ ಖ್ಯಾತನಾಮರು ಬೆಂಬಲವಾಗಿ ನಿಂತಿದ್ದಾರೆ. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ ಹಾಗೂ ಬಾಳೆಹೊನ್ನುರು ಶ್ರೀರಂಭಾಪುರಿ ವೀರಸಿಂಹಾಸನ ಮಹಾಪೀಠಕ್ಕೆ ಮ್ಯಾಕ್ಯಾನಿಕಲ್ ಆನೆಯನ್ನು ನೀಡಲಾಗಿದೆ. ಕರ್ನಾಟಕ ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈ ಆನೆಯ ಪ್ರಾಯೋಜಕರಾಗಿದ್ದು, ಈ ಆನೆಯು ಕಣ್ಣು ಮಿಟುಕಿಸುವುದು, ಬಾಲ ಮತ್ತು ಕಿವಿಯನ್ನು ಅಲ್ಲಾಡಿಸುವುದು, ಸೊಂಡಿಲು ಎತ್ತುವುದು ಹಾಗೂ ಬ್ಯಾಟರಿ ಚಾಲಿತ ಟ್ರಾಲಿ ಮೂಲಕ ಮುಂದೆ ಸಂಚರಿಸುತ್ತದೆ. ಸಿಲಿಕಾನ್ ಫೈಬರ್ ಮೆಟೀರಿಯಲ್‌ನಿಂದ ತಯಾರಿಸಲ್ಪಟ್ಟ ಈ ಆನೆ ಸುಮಾರು 800 ಕೆ.ಜಿ. ತೂಕವಿದ್ದು, ಸರಿಯಾದ ನಿರ್ವಹಣೆಯಿಂದ ಬಹುವರ್ಷ ಬಾಳಿಕೆ ಬರಲಿದೆ ಎಂದು ಆನೆಯನ್ನು ನಿರ್ಮಿಸಿರುವ ಮುಂಬೈ ಮೂಲದ ಆಫೀಶ್ ಸಂಸ್ಥೆ ಹೇಳಿಕೊಂಡಿದೆ.

ಧರ್ಮ ಪೀಠಗಳಲ್ಲಿ ಆನೆಯನ್ನು ಸಾಕುವುದು ಪರಂಪರೆ. ಆದರೆ ಸರ್ಕಾರದ ನಿಯಮದ ಪ್ರಕಾರ ಆನೆ ಸಾಕುವುದಕ್ಕೆ ಅನುಮತಿ ನೀಡುವುದಿಲ್ಲ. ಈ ನಡುವೆ ಧಾರ್ಮಿಕ ಸಂಪ್ರದಾಯವನ್ನು ಮುನ್ನಡೆಸಲು ಪೇಟಾ ಸಂಸ್ಥೆ ಯಾಂತ್ರೀಕೃತ ಆನೆಯನ್ನು ಪೀಠಕ್ಕೆ ನೀಡಿದ್ದು, ವನ್ಯಜೀವಿ ಸಂರಕ್ಷಣೆಗೆ ಅವರು ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.

-ಡಾ.ವೀರಸೋಮೇಶ್ವರ ಜಗದ್ಗುರುಗಳು, ರಂಭಾಪುರಿ ಪೀಠ

ಮಾನವ ಮತ್ತು ಪ್ರಾಣಿ ಸಂಘರ್ಷದಿಂದ ಹಲವು ಜೀವಹಾನಿಯಾಗಿವೆ. ವನ್ಯಜೀವಿಗಳಿಗೂ ಕೂಡ ಬದುಕುವ ಹಕ್ಕಿದೆ. ಧಾರ್ಮಿಕ ಆಚರಣೆಗಾಗಿ ವನ್ಯಜೀವಿಗಳನ್ನು ಹಿಂಸಿಸಬಾರದು. ಇದನ್ನು ತಡೆಗಟ್ಟಲು ಪೇಟಾ ಪರಿಚಯಿಸಿರುವ ರೋಬಾಟಿಕ್ ಆನೆ ಉತ್ತಮ ಹೆಜ್ಜೆಯಾಗಿದ್ದು, ಇಲಾಖೆ ಸಂಸ್ಥೆಯನ್ನು ಅಭಿನಂದಿಸುತ್ತದೆ.

-ಈಶ್ವರ ಖಂಡ್ರೆ, ಅರಣ್ಯ ಮತ್ತು ಪರಿಸರ ಸಚಿವ

ಆನೆಗಳನ್ನು ಒತ್ತಡ ಅಥವಾ ಭಯವಿಲ್ಲದೆ ಕಾಡಿನಲ್ಲಿ ಸಹಜವಾಗಿ ಬದುಕಲು ಬಿಡುವುದಕ್ಕೆ ರೋಬಾಟಿಕ್ ಆನೆ ಪೂರಕವಾಗಿದೆ. ಜೊತೆಗೆ ಸಾರ್ವಜನಿಕರು ಆನೆಗಳನ್ನು ಬಳಕೆ ಮಾಡುವ ಯಾವುದೇ ಸಮಾರಂಭ, ಉತ್ಸವಗಳಲ್ಲಿ ಅಪಾಯವಿಲ್ಲದೆ ಭಾಗವಹಿಸಬಹುದು. ನಮ್ಮ ಉದ್ದೇಶವನ್ನು ದೇವಾಲಯ, ಭಕ್ತರು ಸ್ವಾಗತಿಸಿದ್ದು, ಎಲ್ಲೆಡೆ ಇದನ್ನು ವಿಸ್ತರಿಸುವ ಗುರಿ ಇದೆ.

- ಸುಪರ್ಣ ಗಂಗೂಲಿ, ಕೂಪ ಸಹ ಸಂಸ್ಥಾಪಕಿ

ಉತ್ಸವ ಇತ್ಯಾದಿ ಮೆರವಣಿಗೆಯಲ್ಲಿ ಆನೆಯನ್ನು ಬಳಕೆ ಮಾಡುವುದಕ್ಕೆ ಸಾಕಷ್ಟು ಜನರು ಅನುಮತಿಗಾಗಿ ಇಲಾಖೆಯನ್ನು ಸಂಪರ್ಕಿಸುತ್ತಾರೆ. ಅಂತಹವರಿಗೆ ಪೇಟಾ ಸಂಸ್ಥೆ ಪರಿಚಯಿಸಿರುವ ರೋಬಾಟಿಕ್ ಆನೆಯನ್ನು ಬಳಕೆ ಮಾಡುವಂತೆ ಸಲಹೆ ನೀಡಲಾಗುತ್ತಿದೆ. ಕೆಲವರು ಜೀವಂತ ಆನೆಯೇ ಬೇಕು ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ರೋಬಾಟಿಕ್ ಆನೆ ಬಳಕೆ ಹೆಚ್ಚಾಗುವ ಸಾಧ್ಯತೆಯಿದೆ.

- ಸುಭಾಷ್ ಮಳಖೇಡೆ, ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net