ಸಿರಿಯಾ ಮಾಜಿ ಅಧ್ಯಕ್ಷ ಅಸ್ಸಾದ್​ ಪತ್ನಿಗೆ ಮಾರಣಾಂತಿಕ ಕಾಯಿಲೆ! ಬದುಕುಳಿಯುವ ಸಾಧ್ಯತೆ ತೀರ ಕಡಿಮೆ | Asma

ವಿಜಯವಾಣಿ - 2024-12-26T124538.976
Published on

Asma al-Assad: ಬಂಡುಕೋರರ ಪಡೆಗಳು (Syrian Rebels) ಸಿರಿಯಾ ಸರ್ಕಾರವನ್ನು ತಮ್ಮ ಅಧಿನಕ್ಕೆ ಪಡೆಯುತ್ತಿದ್ದಂತೆ ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ತನ್ನ 25 ವರ್ಷಗಳ ಆಡಳಿತಕ್ಕೆ ರಾಜೀನಾಮೆ ಘೋಷಿಸಿ, ರಷ್ಯಾಕ್ಕೆ ಪಲಾಯನ ಮಾಡಿದರು. ಅಸ್ಸಾದ್​ ಸುದೀರ್ಘ ಆಡಳಿತಕ್ಕೆ ಯುಗಾಂತ್ಯವಾಡಿದ ಬಂಡುಕೋರರು, ಆತ ರಾಜ್ಯಭಾರ ನಡೆಸಿದ ಭವ್ಯ ಬಂಗಲೆ, ಐಷಾರಾಮಿ ಕಾರು, ಬೆಲೆಬಾಳುವ ವಸ್ತುಗಳನ್ನು ಸಿರಿಯಾ ಜನರ ಮುಂದೆ ಬಟಾಬಯಲು ಮಾಡಿದರು.

ಈಗ ಸಿರಿಯಾವನ್ನು ಅಸ್ಸಾದ್​​ರಿಂದ ಸಂಪೂರ್ಣವಾಗಿ ಕಸಿದುಕೊಂಡ ಬಂಡುಕೋರರು, ಸಿರಿಯಾದ ರಾಜಧಾನಿ ಡಮಾಸ್ಕಸ್​ ಅನ್ನು ತಮ್ಮ ಸ್ವಾಧಿನಕ್ಕೆ ಪಡೆದುಕೊಂಡು, ಹೊಸ ಆಡಳಿತಕ್ಕೆ ದಾಪುಗಾಲಿಟ್ಟಿದ್ದಾರೆ. ಸದ್ಯ ರಷ್ಯಾದಲ್ಲಿ ತನ್ನ ಕುಟುಂಬದೊಂದಿಗೆ ಆಶ್ರಯ ಪಡೆದಿರುವ ಬಶರ್​ಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿರುವುದು ಅಚ್ಚರಿ ಮೂಡಿಸುವಂತಿದೆ.

ಲಂಡನ್​ ವಾಸ್ತವ್ಯದ ಚಿಂತೆ

ಇತ್ತೀಚೆಗಷ್ಟೇ ಬಶರ್ ಅಲ್-ಅಸ್ಸಾದ್​ರ ಧರ್ಮಪತ್ನಿ ಅಸ್ಮಾ ಅಲ್-ಅಸ್ಸಾದ್ ಪತಿಯೊಂದಿಗಿರುವ ಸಂಬಂಧವನ್ನು ಮುರಿದುಕೊಳ್ಳಲು ಬಯಸಿ, ರಷ್ಯಾ ಕೋರ್ಟ್​ ಮೆಟ್ಟಿಲೇರಿದ್ದರು ಎಂಬ ಗಾಳಿ ಸುದ್ದಿ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಆದರೆ, ಇದ್ಯಾವುದಕ್ಕೂ ದಂಪತಿಗಳಿಂದ ಸ್ಪಷ್ಟ ಉತ್ತರ ಲಭಿಸಲಿಲ್ಲ. ಒಂದೆಡೆ ಪತಿಯಿಂದ ವಿಚ್ಛೇದನ ಪಡೆದು ಲಂಡನ್​ಗೆ ಹಾರುವ ಯೋಚನೆ ಅಸ್ಮಾ ಅವರದ್ದು ಎಂಬ ಸುದ್ದಿಗಳ ಬೆನ್ನಲ್ಲೇ ಇದೀಗ ಅವರು ಮೂಳೆ ಮಜ್ಜೆ ಮತ್ತು ರಕ್ತದ ಕ್ಯಾನ್ಸರ್​ ಖಾಯಿಲೆಯೆ ಲ್ಯುಕೇಮಿಯಾ ಎಂಬ ಅಪರೂಪದ ರೋಗದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ವರದಿಯೊಂದು ಉಲ್ಲೇಖಿಸಿದೆ.

ವಿಶೇಷ ಅನುಮತಿ

ಲ್ಯುಕೇಮಿಯಾದೊಂದಿಗೆ ಬಳಲುತ್ತಿರುವ ಅಸ್ಮಾ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆಕೆ ಬದುಕುಳಿಯುವ ಸಾಧ್ಯತೆ ಶೇ. 50ರಷ್ಟು ಮಾತ್ರ ಎಂದು ವರದಿಯಾಗಿದೆ. ಬ್ರಿಟಿಷ್ ಮೂಲದ ಅಸ್ಮಾ, ಈ ಸೋಂಕಿನ ಅಪಾಯದಿಂದ ಹೊರಬರಲು ಸೂಕ್ತ ಚಿಕಿತ್ಸೆಯ ಮೊರೆ ಹೋಗಿದ್ದು, ತಮ್ಮ ಮಕ್ಕಳೊಂದಿಗೆ ಲಂಡನ್​ಗೆ ತೆರಳಲು ವಿಶೇಷ ಅನುಮತಿ ಕೋರಿ ರಷ್ಯಾದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದೇಶ ತೊರೆಯಲು ಅಸ್ಮಾ ಸಲ್ಲಿಸಿರುವ ಅರ್ಜಿಯನ್ನು ಸದ್ಯ ರಷ್ಯಾದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net