

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11ರ ಆಟದ ತೆರೆಗೆ ಉಳಿದಿರುವುದು ಕೇವಲ ನಾಲ್ಕೇ ವಾರಗಳು ಮಾತ್ರ. ಮೊದಲ ದಿನದಿಂದಲೂ ಸಾಕಷ್ಟು ಟ್ವಿಸ್ಟ್, ಜಟಾಪಟಿ, ವಾಗ್ವಾದ, ಆರೋಪ-ಪ್ರತ್ಯಾರೋಪಗಳಿಂದಲೇ ಇಲ್ಲಿಯವರೆಗೆ ಸಾಗಿ ಬಂದಿರುವ ಸ್ಪರ್ಧಿಗಳು ಸದ್ಯ ಗೆಲುವಿನ ಹಂತ ತಲುಪಲು ಸನ್ನಿಹಿತದಲ್ಲಿದ್ದಾರೆ. ಒಟ್ಟು 20 ಬಿಗ್ ಬಾಸ್ 11ರ ಘಟಾನುಘಟಿ ಸ್ಪರ್ಧಿಗಳ ಪೈಕಿ ಈಗ ಉಳಿದಿರುವುದು ತ್ರಿವಿಕ್ರಮ್, ಉಗ್ರಂ ಮಂಜು, ರಜತ್, ಐಶ್ವರ್ಯ ಶಿಂಧೋಗಿ, ಭವ್ಯ, ಮೋಕ್ಷಿತಾ, ಧನರಾಜ್, ಹನುಮಂತು ಮತ್ತು ಚೈತ್ರಾ ಕುಂದಾಪುರ.
ಬಿಗ್ ಬಾಸ್ 11 ಶುರುವಾದ ಮೊದಲ ವಾರದಿಂದಲೇ ವೀಕ್ಷಕರ ಗಮನಸೆಳೆದಿದ್ದ ಹಲವಾರು ಸ್ಪರ್ಧಿಗಳಲ್ಲಿ ಮಂಜು ಮತ್ತು ತ್ರಿವಿಕ್ರಮ್ ಮೊದಲಿಗರು. ಮೊದಲ ದಿನದಿಂದಲೂ ಇವರಿಬ್ಬರ ನಡುವಿನ ಜಿದ್ದಾಜಿದ್ದಿ, ಪೈಪೋಟಿ ನೋಡುಗರಲ್ಲಿ ಭರವಸೆ ಮೂಡಿಸಿತ್ತು. ಮಂಜು ಮತ್ತು ತ್ರಿವಿಕ್ರಮ್ ಫಿನಾಲೆ ಸ್ಪರ್ಧಿಗಳು ಎಂದು ಊಹಿಸುವಂತೆ ಮಾಡಿತು. ಇದೆಲ್ಲದರ ಮಧ್ಯೆ 50ನೇ ದಿನಕ್ಕೆ ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿಕೊಟ್ಟ ರಜತ್, ಶೋಭಾ ಶೆಟ್ಟಿ ಮತ್ತು ಹನುಮಂತು ಪೈಕಿ ಶೋಭಾ ಶೆಟ್ಟಿ ಹೆಚ್ಚು ಸದ್ದು ಮಾಡದೆ, ಬಹಳ ಬೇಗ ಮನೆಯಿಂದ ನಿರ್ಗಮಿಸಿದರು.
50 ದಿನಗಳ ಹಿಂದಿದ್ದ ಲೆಕ್ಕಾಚಾರ ದಿನ ಕಳೆದಂತೆ ಬದಲಾಗಿದ್ದು, ಒಬ್ಬರಿಗೊಬ್ಬರು ಟಕ್ಕರ್ ಕೊಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಮಂಜು, ತ್ರಿವಿಕ್ರಮ್, ರಜತ್ ಮತ್ತು ಹನುಮಂತು ಒಂದು ಸಾಲಿನಲ್ಲಿದ್ದರೆ, ಹುಡುಗಿಯರಲ್ಲಿ ಭವ್ಯ ಗೌಡ ಮತ್ತು ಗೌತಮಿ ಜಾದವ್ ಸಖತ್ ಪೈಪೋಟಿಯಲ್ಲಿದ್ದಾರೆ. ವೀಕ್ಷಕರು ಹಾಗೂ ನೆಟ್ಟಿಗರು ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಈ ಸ್ಪರ್ಧಿಗಳು ಗೆಲುವಿನ ರೇಸ್ನಲ್ಲಿರುವ ಮುನ್ಸೂಚನೆಯನ್ನು ನೀಡಿವೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ, ಪೋಲ್ಗಳು ಕೂಡ ನಡೆಯುತ್ತಿವೆ.
ಬಿಗ್ ಬಾಸ್ ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿಜೇತರಾದರೆ, 1ನೇ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಮತ್ತು ಎರಡನೇ ರನ್ನರ್ ಅಪ್ ಆಗಿ ಸಂಗೀತಾ ಶಂಗೇರಿ ಹೊರಹೊಮ್ಮಿದರು. ಆದರೆ, ಈ ಬಾರಿಯ ಸೀಸನ್ 11ರಲ್ಲಿ ಯಾರು ಟ್ರೋಫಿಗೆ ಮುತ್ತಿಡಲಿದ್ದಾರೆ? ಯಾರು ಎರಡು ಮತ್ತು ಮೂರನೇ ರನ್ನರ್ ಅಪ್ ಆಗಿ ಹೊರಬರಲಿದ್ದಾರೆ ಎಂಬುದನ್ನು ಇನ್ನೂ ನಾಲ್ಕು ವಾರಗಳ ನಂತರ ನಡೆಯಲಿರುವ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಾದು ನೋಡಬೇಕಿದೆ.