

ಬಳ್ಳಾರಿ: ಹರಕೆಗೆಂದು ಬಿಟ್ಟಿದ್ದ ಕೋಣಕ್ಕೆ ಡಿಎನ್ಎ ಪರೀಕ್ಷೆ ಮಾಡಿಸಲೇಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಡಿಎನ್ಎ (DNA) ಟೆಸ್ಟ್ಗೆ ಪಟ್ಟುಹಿಡಿದು ಕೂರಲಾಗಿದೆ. ಸದ್ಯ ಈ ಘಟನೆ ಬಹಳ ವಿಚಿತ್ರ ಅನಿಸಿದರೂ ಎರಡು ರಾಜ್ಯಗಳ ನಡುವೆ ದೊಡ್ಡ ಜಟಾಪಟಿಯನ್ನೇ ಸೃಷ್ಟಿಸಿದೆ.
ಆಂದ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಇದೊಂದು ವಿಚಾರಕ್ಕೆ ದೊಡ್ಡ ಸಂಘರ್ಷವೇ ಭುಗಿಲೆದ್ದಿದೆ. ಅದಕ್ಕೆ ಕಾರಣ ಹರಕೆಗೆ ಬಿಟ್ಟಿರುವ ಕೋಣಕ್ಕೆ ಇಬ್ಬರು ತಾಯಂದಿರು. ಒಂದೇ ಕೋಣಕ್ಕೆ ಎರಡು ತಾಯಿ ಎಮ್ಮೆಗಳಿರುವುದು ಸದ್ಯ ಜಟಾಪಟಿಗೆ ಮೂಲ ಕಾರಣ ಎನ್ನಲಾಗಿದೆ. ಬಳ್ಳಾರಿ ಗಡಿ ಗ್ರಾಮ ಬೊಮ್ಮನಹಾಳು ಹಾಗೂ ಆಂಧ್ರಪ್ರದೇಶದ ಮೆದ್ದಹಾಳ್ ಗ್ರಾಮಸ್ಥರ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.
"ಇದು ಗ್ರಾಮ ದೇವತೆ ಸುಂಕಲಮ್ಮನ ಕೋಣ. ಕೋಣದ ತಾಯಿ ನಮ್ಮ ಬಳಿಯೇ ಇದೆ. ನಿಮಗೆ ಸಾಕ್ಷಿ ಬೇಕಿದ್ರೆ ಹೋಗಿ ಡಿಎನ್ಎ ಟೆಸ್ಟ್ ಮಾಡಿಸಿ. ನಾವು ಪರೀಕ್ಷೆಗೆ ಒಳಪಡಿಸಲು ಸಿದ್ಧ" ಎಂದು ಬೊಮ್ಮನಹಾಳು ಗ್ರಾಮಸ್ಥರು ವಾದಿಸಿದರೆ, ಅತ್ತ ಆಂಧ್ರ ಮೆದೆಹಾಳ್ ಗ್ರಾಮಸ್ಥರು, "ಈ ಕೋಣ ನಮ್ಮ ದ್ಯಾಮಮ್ಮ ದೇವಿಗೆ ಬಿಟ್ಟಿರುವ ಕೋಣ. ನಮ್ಮ ಜತೆಯೂ ಕೋಣದ ತಾಯಿಯಿದೆ. ಪ್ರಮಾಣ ಮಾಡಿ ಹೇಳ್ತೀವಿ" ಎಂದು ಸವಾಲು ಹಾಕಿದ್ದಾರೆ.
ಕಳೆದು ಒಂದು ವಾರದಿಂದ ಆಂಧ್ರಪ್ರದೇಶದ ಮೆದೆಹಾಳ್‌ನಲ್ಲಿ ಗ್ರಾಮಸ್ಥರು ಕೋಣವನ್ನು ಕಟ್ಟಿ ಹಾಕಿ ಕಾವಲು ಕಾಯುತ್ತಿದ್ದು, ಸದ್ಯ ಈ ವಿಷಯ ಎರಡು ರಾಜ್ಯದ ಅಧಿಕಾರಿಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೊಸ ವರ್ಷದ ಮೊದಲ ತಿಂಗಳಲ್ಲಿ ಎರಡು ಗ್ರಾಮಗಳ ಜಾತ್ರೆ ನಿಗದಿಯಾಗಿದೆ. ನಮ್ಮ ಕೋಣವನ್ನು ಆಂಧ್ರದವರು ಹೊತ್ತೊಯ್ದು ಕಟ್ಟಿ ಹಾಕಿದ್ದಾರೆ ಎಂದು ಬೊಮ್ಮನಹಾಳು ಗ್ರಾಮಸ್ಥರು ಆರೋಪಿಸಿದ್ದಾರೆ.
ಆ ಕೋಣ ನಮ್ಮದು. ಕೋಣ ನಮ್ಮದೇ ಎಂದು ಹೇಳಲು ನಮ್ಮ ಬಳಿ ಪುರಾವೆಗಳಿವೆ. ಅವರು ಆಣೆ ಮಾಡಲಿ, ಡಿಎನ್ಎ ಟೆಸ್ಟ್ಗೆ ಕರೆತರಲಿ ಎಂದು ಬೊಮ್ಮನಹಾಳು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ, ಯಾವುದೇ ಕಾರಣಕ್ಕೂ ನಾವು ಕೋಣ ವಾಪಾಸ್ ಬಿಡೋದಿಲ್ಲ ಎಂದು ಮೆದ್‌ಹಾಳ್ ಗ್ರಾಮಸ್ಥರು ತಿಳಿಸಿದ್ದಾರೆ.