

UI Review: ಪ್ರಶ್ನೆಗಳು ಉದ್ಬವಗೊಂಡರೆ ಅದನ್ನು ಕೇಳಿ ಸುಮ್ಮನಾಗುವ ಜನರು. ಅದೇ ಪ್ರಶ್ನೆಗಳು ತಲೆಗೆ ಹೊಕ್ಕಿ, ಬೆಂಬಿಡದೆ ಕಾಡಲಾರಂಭಿಸಿದರೆ ಉತ್ತರದ ಹುಡುಕಾಟದಲ್ಲಿ ಮಗ್ನರಾಗುತ್ತಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಕನ್ನಡ ಚಿತ್ರರಂಗದ 'ಬುದ್ಧಿವಂತ' ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ, ಇಂದು ಜಾಗತಿಕವಾಗಿ ರಿಲೀಸ್ ಆದ ಬಹು ನಿರೀಕ್ಷಿತ 'ಯುಐ' ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ತಮ್ಮ ನಿರ್ದೇಶನದಲ್ಲಿ ಪ್ರೇಕ್ಷಕರ ತಲೆಗೆ ಹುಳ ಬಿಡುವ ಉಪ್ಪಿ, ಇದೀಗ 10 ವರ್ಷಗಳ ನಂತರ ಡೈರೆಕ್ಷನ್ಗೆ ಮರಳಿರುವ ಕಾರಣ ಈಗ ಯುಐ ಮೂಲಕ ಪ್ರೇಕ್ಷಕ ಪ್ರಭುವಿನ ಬುದ್ಧಿವಂತಿಕೆಯನ್ನು ಪರೀಕ್ಷಿಸಿದ್ದಾರೆ. ಅಪಾರ ನಿರೀಕ್ಷೆಯಿಟ್ಟು, ಕಥೆಯ ಎಳೆಯನ್ನು ಎಳೆಯಲು ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ಪ್ರೇಕ್ಷಕರು, ದ್ವಿತೀಯಾರ್ಧದ ನಂತರ ಗೊಂದಲದಲ್ಲಿಯೇ ಥಿಯೇಟರ್ನಿಂದ ಹೊರಬಂದಿರುವುದು ಅಚ್ಚರಿ.
10 ವರ್ಷಗಳ ನಂತರ ತಾವೇ ನಿರ್ದೇಶಿಸಿ, ನಟಿಸಿದ ಪ್ಯಾನ್ ಇಂಡಿಯಾ 'ಯುಐ' ಚಿತ್ರ ಇಂದು (ಡಿ.20) ಜಾಗತಿಕ ಮಟ್ಟದಲ್ಲಿ ಭರ್ಜರಿ ಓಪನಿಂಗ್ ಪಡೆದಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಮೊದಲ ಪ್ರದರ್ಶನ ಆರಂಭಗೊಂಡಿದ್ದು, ಉಪೇಂದ್ರ ಅಡಗಿಸಿಟ್ಟಿರುವ ವಿಷಯವೇನು? ಯಾವೆಲ್ಲಾ ಸಂಗತಿ ಎಂಬುದನ್ನು ಅರ್ಥೈಸಿಕೊಳ್ಳಲು ಚಿತ್ರಮಂದಿರಕ್ಕೆ ಭಾರೀ ಕುತೂಹಲದಲ್ಲಿ ದೌಡಾಯಿಸಿದ ಚಿತ್ರರಸಿಕರಿಗೆ ಉಂಟಾಗಿದ್ದು ಕೇವಲ ನಿರಾಶೆ. ತಾವು ಅಂದುಕೊಂಡಿದ್ದು ಈಡೇರಲಿಲ್ಲ ಎಂಬುದಷ್ಟೇ ಇದಕ್ಕೆ ಕಾರಣ.
ಎಂದಿನಂತೆ ಉಪೇಂದ್ರ ಅಭಿನಯಿಸಿದ ಅಥವಾ ನಿರ್ದೇಶನದ ಸಿನಿಮಾ ಅಂದಮೇಲೆ ಪ್ರಾರಂಭದಲ್ಲೇ ಏನಾದರೂ ಒಂದು ವಿಷಯ ಬಹಳ ವಿಚಿತ್ರವಾಗಿ ಸಿನಿರಸಿಕರ ಗಮನಸೆಳೆಯುತ್ತದೆ. 'ಯುಐ'ನಲ್ಲೂ ಅದೇ ಅನುಭವ ಪ್ರೇಕ್ಷಕರಿಗೆ ಉಂಟಾಯಿತು. ಟೈಟಲ್ ಕಾರ್ಡ್ಗೂ ಮುನ್ನವೇ ಕೌತುಕದಿಂದ ಸಿನಿಮಾ ಶುರುವಿಗೆ ಕುಳಿತಿದ್ದ ಆಡಿಯನ್ಸ್ಗೆ ತಾವು ಕೂತಿರಬೇಕೋ ಅಥವಾ ಎದ್ದು ಹೋಗಬೇಕೋ ಎಂಬ ಪ್ರಶ್ನೆ ಒಂದು ನಿಮಿಷ ತೀವ್ರ ಗೊಂದಲ ಮೂಡಿಸುವಂತ ಒಂದು ಸನ್ನಿವೇಶ ಕಾಡಿತು. 'ಫೋಕಸ್' ಎಂಬ ಪದವು ಪ್ರೇಕ್ಷಕರ ಮಿದುಳು ಮತ್ತು ಕಣ್ಣನ್ನು ಅತ್ತ-ಇತ್ತ ಸುಳಿಯದಂತೆ ಕೇವಲ ಪರದೆಯ ಮೇಲೆ ಮಾತ್ರ ಹರಿಸುವಂತೆ ಮಾಡಿದ್ದು ಚಿತ್ರದ ಮತ್ತೊಂದು ವಿಶೇಷತೆ.
'ವಾರ್ನರ್' ಮೂಲಕವೇ ಜಗತ್ತಿನ ಕೆಲವು ಮುಖ್ಯ ವಿಷಯಗಳ ಬಗ್ಗೆ ಸುಳಿವು ಕೊಟ್ಟಿದ್ದ ಉಪ್ಪಿ, ಮೊದಲ ಹಂತದಲ್ಲೇ ಜನರ ಅರ್ಥಕ್ಕೆ ಬಿಟ್ಟಿದ್ದರು. ಇದಾದ ನಂತರ ಸಿನಿಮಾದಲ್ಲಿ ಪ್ರಸ್ತುತ ಕಾಲಘಟ್ಟ, ವರ್ತಮಾನ ಮತ್ತು ಭವಿಷ್ಯದಲ್ಲಿ ಜನರ ಸ್ಥಿತಿ, ಪರಿಸ್ಥಿತಿ ಹೇಗಿರುತ್ತದೆ ಎಂಬುದರ ಸಣ್ಣ ಝಲಕ್ ಹಾದು ಹೋಗುತ್ತದೆ. ಯಾರ ಕೈಯಲ್ಲಿ ಏನಿರಬೇಕು, ಯಾರ ಬಳಿ ಅಧಿಕಾರವಿದ್ದರೆ ಏನಾಗುವುದು ಎಂಬುದರ ಮನವರಿಕೆ ಮಾಡಿದಂತಿದೆ ಕೆಲವೊಂದು ಸನ್ನಿವೇಶ. ಆಧುನಿಕ ಪ್ರಪಂಚದಲ್ಲಿ ಮನುಷ್ಯನ ತಲೆಯಲ್ಲಿರುವುದೇನು? ತಿಳಿದುಕೊಂಡಿರುವುದೇನು? ಅರ್ಥೈಸಿಕೊಂಡಿರುವುದೆಷ್ಟು ಎಂಬುದು ಅಲ್ಲಲ್ಲಿ ನೋಡುಗರನ್ನು ಕಾಡುತ್ತದೆ.
ಮೊದಲಾರ್ಧ ಒಂದು ವಿಷಯ ಹೇಳಿದರೆ, ದ್ವಿತೀಯಾರ್ಧ ಏನ್ನನ್ನೂ ಹೇಳುತ್ತದೆ? ಅಸಲಿಗೆ ಉಪ್ಪಿ ಹೇಳಲು ಹೊರಟ್ಟಿದ್ದೇನು ಎಂಬ ಪ್ರಶ್ನೆ ಚಿತ್ರಮಂದಿರದಿಂದ ಮನೆಯವರೆಗೆ ಹೋಗುವ ದಾರಿಯುದ್ದಕ್ಕೂ ಪ್ರೇಕ್ಷಕರಲ್ಲಿ ಕಾಡಿರುವುದರಲ್ಲಿ ಅನುಮಾನವೇ ಇಲ್ಲ. ಧಿಕ್ಕಾರಕ್ಕಿಂತ ಅಧಿಕಾರಕ್ಕೇ ಬೆಲೆ ಜಾಸ್ತಿ ಎಂಬ ಡೈಲಾಗ್ನಿಂದಲೇ ಸಿನಿಮಾದ ಕ್ಲೈಮ್ಯಾಕ್ಸ್ಗೆ ದಾರಿಯಾಗುವುದು ಸಿನಿರಸಿಕರ ಲೆಕ್ಕಾಚಾರವನ್ನು ಬದಲಿಸುವುದಲ್ಲದೇ ಅಂತಿಮವಾಗಿ ದೊಡ್ಡ ಕನ್ಫ್ಯೂಷನ್ಗೆ ದೂಡುತ್ತದೆ. ಒಟ್ಟಾರೆ ಉಪ್ಪಿ ಸಿನಿಮಾ ಗೊಂದಲ ಮೂಡಿಸುವುದಕ್ಕೆ, ತಲೆಗೆ ಹುಳ ಬಿಡುವುದಕ್ಕೆ ಹೇಳಿ ಮಾಡಿಸಿರುವುದು ಎಂಬ ಮಾತುಗಳು ಈಗ ಮತ್ತೊಮ್ಮೆ 'ಯುಐ' ಮೂಲಕ ಸಾಬೀತಾಗಿದೆ. ಒಂದು ಬಾರಿ ನೋಡುವ ಜನರಿಗೆ ಮೊದಲ ನೋಟದಲ್ಲಿಯೇ ಉತ್ತರ ಸಿಗಬಾರದು ಎಂದು ಚಿತ್ರವನ್ನು ರೂಪಿಸುವ 'ಬುದ್ಧಿವಂತ', ಎರಡನೇ ಬಾರಿ ಚಿತ್ರಮಂದಿರಕ್ಕೆ ಬರಲಿ ಎಂಬ ಟೆಕ್ನಿಕ್ನ ಇಲ್ಲಿ ಅದ್ಭುತವಾಗಿ ಬಳಸಿಕೊಂಡಿರುವುದು ವಿಶೇಷ.