ರಷ್ಯಾ-ಉಕ್ರೇನ್​ ಯುದ್ಧ: ವ್ಲಾಡಿಮಿರ್​ಗೆ ಕಿಮ್ ಜಾಂಗ್​ ಉನ್ ಸಾಥ್​! ಇಷ್ಟೊಂದು ರಿಸ್ಕ್ ಹಿಂದಿನ ಉದ್ದೇಶ ಇದೇನಾ? | Russia

ವಿಜಯವಾಣಿ - 2024-12-19T171339.040
Published on

Alliance With Russia: ಉಕ್ರೇನ್​ ಭಾಗವನ್ನು ಸಂಪೂರ್ಣ ನಾಶಗೊಳಿಸಲು ಪಣತೊಟ್ಟು ನಿಂತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟೀನ್​ಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಂಗ್ ಜಾಂಗ್​​ ಉನ್​ ಸಾಥ್​ ನೀಡಿರುವುದು ಸದ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ತನ್ನದೇ ದೇಶದ 100ಕ್ಕೂ ಹೆಚ್ಚು ಸೈನಿಕರು ರಷ್ಯಾಗಾಗಿ ಹೋರಾಡುವಾಗ ಉಕ್ರೇನ್​ ದಾಳಿಗೆ ಜೀವ ಕಳೆದುಕೊಂಡಿದ್ದರೂ ಸಹ ಅದನ್ನು ಲೆಕ್ಕಿಸದೆ, ಮತ್ತೊಂದು ವಿಶೇಷ ಸೇನಾ ಪಡೆಯನ್ನು ಕಳಿಸಲು ಸಜ್ಜಾಗಿರುವುದು ಸದ್ಯ ಆಶ್ವರ್ಯ ಮೂಡಿಸುವಂತಿದೆ.

“ಉಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧಕ್ಕಾಗಿ ಈ ತಿಂಗಳ ಆರಂಭದಲ್ಲಿ ಕಿಂಗ್ ಜಾಂಗ್​, ಉತ್ತರ ಕೊರಿಯಾದಿಂದ ಬರೋಬ್ಬರಿ 11 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ಕಳಿಸಿದ್ದರು. ಸಮರದಲ್ಲಿ ತೊಡಗಿದ್ದವರಲ್ಲಿ ಕನಿಷ್ಠ 100 ಸೈನಿಕರು ಮರಣ ಹೊಂದಿದ್ದಾರೆ. ರಷ್ಯಾದಲ್ಲಿ ಉಂಟಾದ ಯೋಧರ ಸಾವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಸರ್ವಾಧಿಕಾರಿ, ಇದರ ಬೆನ್ನಲ್ಲೇ ಹೊಸ ವಿಶೇಷ ಕಾರ್ಯಾಚರಣೆ ಪಡೆಗೆ ತರಬೇತಿ ನೀಡಿ, ಆ ಸೇನೆಯನ್ನು ರಷ್ಯಾಗೆ ಕಳಿಸಲು ಸಕಲ ತಯಾರಿಗೆ ಮುಂದಾಗಿದ್ದಾರೆ" ಎಂದು ದಕ್ಷಿಣ ಕೊರಿಯಾದ ಶಾಸಕ ಲೀ ಸಿಯೊಂಗ್-ಕ್ವೆನ್ ಮಾಹಿತಿ ಹಂಚಿಕೊಂಡಿದ್ದಾರೆ.

ಇಷ್ಟೊಂದು ರಿಸ್ಕ್​ ಏಕೆ?

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಬೆನ್ನೆಲುಬಾಗಿ ನಿಂತಿರುವ ಉತ್ತರ ಕೊರಿಯಾ ಸೈನಿಕರು, ಉಕ್ರೇನ್​ ಕಸಿದುಕೊಂಡಿರುವ ರಷ್ಯಾದ ಪ್ರದೇಶಗಳನ್ನು ಹಿಂತಿರುಗಿಸಿಕೊಡಲು ತಮ್ಮ ಪ್ರಾಣವನ್ನೇ ಪಣಕ್ಕಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 11 ಸಾವಿರಕ್ಕೂ ಹೆಚ್ಚು ಯೋಧರನ್ನು ರಷ್ಯಾಗೆ ಕಳಿಸಿಕೊಡುವ ಕಿಂಗ್ ಜಾಂಗ್​ ಉದ್ದೇಶ ಬಹಳ ದೊಡ್ಡದಾಗಿಯೇ ಇದೆ. ಕುರ್ಸ್ಕ್ ಪ್ರದೇಶದಲ್ಲಿ ರಷ್ಯಾದ ಪಡೆಗಳೊಂದಿಗೆ ಹೋರಾಡುತ್ತಿರುವ ತನ್ನ ಸೈನಿಕರು, ವ್ಲಾಡಿಮರ್​ ಬಯಸಿದ್ದನ್ನು ಪೂರೈಸಿಕೊಟ್ಟರೆ ತಾನು ಮುಂದಿಟ್ಟಿರುವ ಬೇಡಿಕೆಗಳು ಸುಲಭವಾಗಿ ಈಡೇರುತ್ತದೆ ಎಂಬುದೇ ಇಷ್ಟಕ್ಕೆಲ್ಲ ಕಾರಣ. ಇದಕ್ಕೆ ವಿಶ್ಲೇಷಕರು ಹೇಳಿರುವ ಮಾತುಗಳೇ ಪುಷ್ಠಿ.

ಸಾವಿನ ಸಂಖ್ಯೆ ಹೆಚ್ಚಿರಬಹುದು

ಸೋಮವಾರ (ಡಿ.16) ಪೆಂಟಗನ್ ವಕ್ತಾರರಾದ ಮೇಜರ್ ಜನರಲ್ ಪ್ಯಾಟ್ ರೈಡರ್, ಅನಿರ್ದಿಷ್ಟ ಸಂಖ್ಯೆಯ ಉತ್ತರ ಕೊರಿಯಾದ ಸೈನಿಕರು ಯುದ್ಧ ಸಂಭವಿಸುತ್ತಿರುವ ಹಲವು ಪ್ರದೇಶಗಳಲ್ಲಿ ಸಾವಿಗೀಡಾಗಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ. 100 ಸೈನಿಕರ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಶಂಕೆಯಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟಾದರೂ ತನ್ನ ಯೋಧರ ಜೀವಕ್ಕೆ ಸ್ಪಂದಿಸದ ಕಿಂಗ್ ಜಾಂಗ್​, ಇದೀಗ ಮತ್ತೊಂದು ನುರಿತ ಸೇನಾ ಪಡೆಯನ್ನು ರಷ್ಯಾಗೆ ಕಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಅಚ್ಚರಿಯ ಸಂಗತಿ.

ಲಾಭದ ಹಿಂದೆ ಸರ್ವಾಧಿಕಾರಿ

ರಷ್ಯಾಗೆ ಸೈನಿಕರನ್ನು ಕಳಿಸುವ ಉದ್ದೇಶದ ಹಿಂದೆ ರಾಜತಾಂತ್ರಿಕ ಹತೋಟಿ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಕಿಂಗ್ ಜಾಂಗ್​ ಬಯಸಿದ್ದಾನೆ. ಪ್ರಸ್ತುತ ರಷ್ಯಾದಿಂದ ಶತಕೋಟಿ ಡಾಲರ್ ಮೌಲ್ಯದ ಆಹಾರ, ತೈಲ, ನಗದು ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪಡೆಯುತ್ತಿದ್ದಾನೆ. ಇದು ದೇಶದ ಆಡಳಿತವು ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಸಹಿಸಿಕೊಳ್ಳಲು ಮತ್ತು ಅದರ ಸಾಂಪ್ರದಾಯಿಕ ಸಶಸ್ತ್ರ ಪಡೆಗಳನ್ನು ನವೀಕರಿಸಲು ಸಹಾಯ ಮಾಡುತ್ತದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net