ಎಸ್ಸಿ, ಎಸ್ಟಿ ಸಮುದಾಯದ ಸ್ಮಶಾನ ಅಭಿವೃದ್ಧಿಗೆ ಕ್ರಮ

HUN-JAN-16-1(TAHASILDAR VISIT TO K M VADI)
Published on

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಗಳಿಗೆ ಮೀಸಲಿರುವ ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.


ಮಂಗಳವಾರ ಗ್ರಾಮದ ನಂದಿ ವೃತ್ತದ ಬಳಿಯಿರುವ 3 ಎಕರೆ ವಿಸ್ತಾರದ ಸ್ಮಶಾನ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಸ.ನಂ.192ರಲ್ಲಿ ಒಟ್ಟು 4.20 ಎಕರೆ ಭೂಮಿಯಿದೆ. ಈ ಪೈಕಿ 3 ಎಕರೆಯನ್ನು ಪರಿಶಿಷ್ಟ ಜಾತಿ, ಪಂಗಡದ ಸಮುದಾಯಕ್ಕಾಗಿ ಮೀಸಲಿದ್ದು, ಮಿಕ್ಕ 1.20 ಎಕರೆ ಇತರ ಸಮುದಾಯಗಳಿಗೆ ಮೀಸಲಿರಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿಯಿಂದಾಗಿ ಸ್ಮಶಾನದ ಮೇಲ್ಭಾಗದ ಸಿಲುಬೆಗೆರೆ ಕೋಡಿ ಬಿದ್ದಿ ಮತ್ತು ಗ್ರಾಮದ ಚರಂಡಿ ನೀರು ಸ್ಮಶಾನದ ಬಯಲಿಗೆ ಹರಿದು ಬರುತ್ತಿರುವ ಕಾರಣ ಅಂತ್ಯಸಂಸ್ಕಾರ ಮಾಡಲಾಗದೆ ಪರದಾಡುವಂತಾಗಿದೆ ಎಂದರು.
ಈ ಕುರಿತು ದಲಿತ ಸಂಘರ್ಷ ಸಮಿತಿಯ ನಿಂಗರಾಜ ಮಲ್ಲಾಡಿ ಸಾಕಷ್ಟು ಬಾರಿ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಈ ನಡುವೆ ಜಿಲ್ಲಾಮಟ್ಟದ ಪ.ಜಾತಿ, ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಇತ್ತೀಚೆಗೆ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದರು. ಜಿಲ್ಲಾಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಲು ಸೂಚಿಸಿದ್ದು, ಅದರಂತೆ ಪರಿಶೀಲನೆ ನಡೆಸಲಾಗಿದೆ. ಸ್ಮಶಾನದ ಅಭಿವೃದ್ಧಿ ಹಾಗೂ ಸ್ಮಶಾನದ ಮಧ್ಯದಲ್ಲಿ ರಾಜಕಾಲುವೆ ನಿರ್ಮಿಸಿ ನೀರು ಹೊರ ಹೋಗುವಂತೆ ಮಾಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ತಾಪಂ ಇಂಜಿನಿಯರ್ ನರಸಿಂಹಯ್ಯ ಅವರಿಗೆ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದ್ದೇನೆ. ಜಿಲ್ಲಾಧಿಕಾರಿಗಳು ಮತ್ತು ಶಾಸಕ ಜಿ.ಡಿ.ಹರೀಶ್‌ಗೌಡರೊಂದಿಗೆ ಚರ್ಚಿಸಿ ಅನುದಾನ ಪಡೆದು ಕಾಮಗಾರಿ ನಡೆಸಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಸ್ಮಶಾನದ ಅಭಿವೃದ್ಧಿ ಅತ್ಯಂತ ಜರೂರಾಗಿದ್ದು, ಸತ್ತ ನಂತರವೂ ಶಾಂತಿ ಸಿಗದ ಪರಿಸ್ಥಿತಿ ಶೋಷಿತರದ್ದಾಗಿದೆ. ತಾಲೂಕು ಆಡಳಿತ ಸೂಕ್ತ ಕ್ರಮ ವಹಿಸುತ್ತಿರುವುದು ಸಮಾಧಾನ ತಂದಿದೆ ಎಂದರು.


ತಾಲೂಕು ಪಂಚಾಯಿತಿ ಯೋಜನಾ ನಿರ್ದೇಶಕ ರಾಜೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ಗಾವಡಗೆರೆ ಕಂದಾಯಾಧಿಕಾರಿಗಳಾದ ಅರುಣ್‌ಕುಮಾರ್, ಹೇಮಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರಿ, ಸಿಬ್ಬಂದಿ ಮಹದೇವ, ವಿ.ಎ.ಶ್ರೀವಾಸ್ತವ, ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿನ್ನಮುತ್ತು, ಉಪಾಧ್ಯಕ್ಷ ದಿಲೀಪ್, ಗ್ರಾಪಂ ಸದಸ್ಯರಾದ ನಟರಾಜು, ತ್ಯಾಗರಾಜು, ಮಾದೇವ, ಎಸ್.ಗಣೇಶ, ದಸಂಸ ಮುಖಂಡ ದೇವೇಂದ್ರ ಕುಳುವಾಡಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net