ಇಂದಿರಾ ಆಸ್ತಿಗಾಗಿ ಪಿತ್ರಾರ್ಜಿತ ತೆರಿಗೆ ರದ್ದು; ರಾಜೀವ್​ ಗಾಂಧಿ ವಿರುದ್ಧವೂ ಮೋದಿ ವಾಗ್ದಾಳಿ

PM Modi
Published on

ನವದೆಹಲಿ: ಪಿತ್ರಾರ್ಜಿತ ತೆರಿಗೆ ಅಥವಾ ಆನುವಂಶೀಯ ತೆರಿಗೆ (ಇನ್​ಹೆರಿಟೆನ್ಸ್ ಟ್ಯಾಕ್ಸ್) ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಪಕ್ಷವನ್ನು ಗುರಿಯಾಗಿಸಿ ನಡೆಯುತ್ತಿದ್ದ ಟೀಕೆ ಇದೀಗ ಅವರ ತಂದೆಯನ್ನೂ ಸುತ್ತಿಕೊಂಡಿದೆ.

ಭಾರತದಲ್ಲಿ ತನ್ನದೇ ಆದ ಇನ್​ಹೆರಿಟೆನ್ಸ್ ಟ್ಯಾಕ್ಸ್ ಅಥವಾ ಎಸ್ಟೇಟ್ ಡ್ಯೂಟಿ 1950ರ ದಶಕದಲ್ಲೇ ಇತ್ತು. ಆದರೆ, ಅದನ್ನು ತನ್ನ ತಾಯಿ ಇಂದಿರಾ ಗಾಂಧಿ ಅವರ ಆಸ್ತಿಗಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರದ್ದುಗೊಳಿಸಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಮೊರೆನಾದಲ್ಲಿ ಗುರುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾದ ಪ್ರಧಾನಿ ಮೋದಿ ಮತ್ತೆ ವಿಪಕ್ಷದತ್ತ ವಾಗ್ದಾಳಿ ನಡೆಸಿದ್ದಾರೆ.

ಭಾರತದಲ್ಲಿ 1953ರಿಂದ 1985ರ ಅವಧಿಯಲ್ಲಿ ಇನ್​ಹೆರಿಟೆನ್ಸ್ ಟ್ಯಾಕ್ಸ್ ಲಾ (ಎಸ್ಟೇಟ್ ಡ್ಯೂಟಿ) ಎನ್ನುವುದು ಇತ್ತು. ಆದರೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ತನ್ನ ತಾಯಿ ಇಂದಿರಾ ಗಾಂಧಿ ಅವರ ಆಸ್ತಿಗಾಗಿ 1985ರಲ್ಲಿ ಆ ಕಾನೂನನ್ನು ರದ್ದುಗೊಳಿಸಿದ್ದರು ಎಂದು ಪ್ರಧಾನಿ ಮೋದಿ ಕಿಡಿಕಾರಿದರು.

ಕಾಂಗ್ರೆಸ್ ಗೆದ್ದರೆ ಮೀಸಲಾತಿಗೂ ಕುತ್ತು ತರಲಿದೆ: ಕರ್ನಾಟಕದಲ್ಲಿ ಎಲ್ಲ ಮುಸ್ಲಿಮರನ್ನೂ ಇತರ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಸೇರಿಸಿರುವುದನ್ನೂ ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಕಡೆಯೂ ಇದೇ ರೀತಿ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ತನ್ನ ತುಷ್ಟೀಕರಣ ರಾಜಕಾರಣದ ಹಿನ್ನೆಲೆಯಲ್ಲಿ ಹೊಸ ಯೋಜನೆ ಹಾಕಿಕೊಂಡಿದೆ. ಕಾಂಗ್ರೆಸ್​ನವರು ಗೆದ್ದರೆ ಹಿಂದುಳಿದ ವರ್ಗದವರ ಮೀಸಲಾತಿಯನ್ನು ದೋಚಿ ಅದನ್ನು ಅವರ ನೆಚ್ಚಿನ ಮತಬ್ಯಾಂಕ್ ಆದ ಮುಸ್ಲಿಮರಿಗೆ ನೀಡುತ್ತಾರೆ ಎಂದ ಮೋದಿ, ಬಿಜೆಪಿ ಯಾವತ್ತೂ ‘ಸರ್ವರ ಜತೆಗೆ, ಸರ್ವರ ವಿಕಾಸ’ (ಸಬ್ ಕಾ ಸಾಥ್, ಸಬ್ ಕಾ ವಿಕಾಸ್) ಎಂಬ ತತ್ವದಲ್ಲಿ ಆಡಳಿತ ನಡೆಸುತ್ತದೆ ಎಂದರು. ನೀವು ಹಾಗೂ ನಿಮ್ಮನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್​ನ ಯೋಜನೆಗಳ ಮಧ್ಯದ ಗೋಡೆಯಾಗಿ ಮೋದಿ ಇದ್ದಾರೆ ಎಂದು ಜನರಿಗೆ ಪ್ರಧಾನಿ ಅಭಯ ನೀಡಿದರು.

ಮುಸ್ಲಿಮರನ್ನು ಮೊದಲು ಒಬಿಸಿಗೆ ಸೇರಿಸಿದ್ದೇ ಜಾತ್ಯತೀತ ಜನತಾದಳ: ಕರ್ನಾಟಕದಲ್ಲಿನ ಎಲ್ಲ ಮುಸ್ಲಿಮರನ್ನು ಒಬಿಸಿಗೆ ಸೇರಿಸಲಾಗಿದೆ ಎಂಬ ವಿಚಾರ ಇದೀಗ ಕಾಳ್ಗಿಚ್ಚಿನಂತೆ ದೇಶಾದ್ಯಂತ ವ್ಯಾಪಿಸಿರುವ ನಡುವೆಯೇ ರಾಜ್ಯದಲ್ಲಿ ಮೊದಲ ಸಲ ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಜಾತ್ಯತೀತ ಜನತಾದಳ ಎಂಬ ಸಂಗತಿ ಮುನ್ನೆಲೆಗೆ ಬಂದಿದೆ. ಮುಸ್ಲಿಮರನ್ನು ಒಬಿಸಿಗೆ ಸೇರಿಸಿರುವುದನ್ನು ತೀವ್ರವಾಗಿ ವಿರೋಧಿಸುತ್ತಿರುವ ಬಿಜೆಪಿ ಜತೆಗೆ ಈಗ ಮೈತ್ರಿಯಲ್ಲಿರುವ ಜೆಡಿಎಸ್ ಪಕ್ಷ 1995ರಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಮುಸ್ಲಿಮರನ್ನು ಒಬಿಸಿಗೆ ಸೇರಿಸಿತ್ತು ಎಂಬ ದಾಖಲೆಗಳು ಹರಿದಾಡಲಾರಂಭಿಸಿವೆ. ಕಾಂಗ್ರೆಸ್ ಸರ್ಕಾರ ಈ ಮೀಸಲಾತಿಯನ್ನು 1994ರಲ್ಲಿ ಘೋಷಣೆ ಮಾಡಿತ್ತಾದರೂ 1995ರಲ್ಲಿ ಇದನ್ನು ಅನುಷ್ಠಾನಗೊಳಿಸಿದ್ದು ಜೆಡಿಎಸ್ ಎಂಬುದು ದಾಖಲೆಗಳಿಂದ ಕಂಡುಬಂದಿದೆ.

ಏನದು ಇನ್​ಹೆರಿಟೆನ್ಸ್ ಟ್ಯಾಕ್ಸ್ ಲಾ?: ಎಸ್ಟೇಟ್ ಡ್ಯೂಟಿ ಎಂದೂ ಕರೆಯಲಾಗುವ ಇನ್​ಹೆರಿಟೆನ್ಸ್ ಟ್ಯಾಕ್ಸ್ ಲಾ ಎಂಬ ಕಾನೂನನ್ನು ಭಾರತದಲ್ಲಿ 1953ರಲ್ಲಿ ಮೊದಲ ಸಲ ಪರಿಚಯಿಸಲಾಗಿತ್ತು. ಆ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯ ಸಾವಿನ ಬಳಿಕ ಆತನ ಮಕ್ಕಳು ಅಥವಾ ಕುಟುಂಬದ ಪಾಲಾಗುವ ಸ್ಥಿರ-ಚರ ಸೇರಿ ಒಟ್ಟು ಆಸ್ತಿಯ ಮೇಲೆ ಎಸ್ಟೇಟ್ ಡ್ಯೂಟಿ ಹಾಕಲಾಗುತ್ತಿತ್ತು. ಆಸ್ತಿಯ ಒಟ್ಟು ಮೌಲ್ಯ 20 ಲಕ್ಷ ರೂಪಾಯಿಗೂ ಅಧಿಕ ಇದ್ದರೆ ಶೇ. 85 ಹಾಗೂ ಆಸ್ತಿಯ ಒಟ್ಟು ಮೌಲ್ಯ 1 ಲಕ್ಷ ರೂಪಾಯಿಗೂ ಮೇಲ್ಪಟ್ಟಿದ್ದರೆ ಶೇ. 7.5 ತೆರಿಗೆ ಹಾಕಲಾಗುತ್ತಿತ್ತು. ಆ ಸಮಯದ ಮಾರುಕಟ್ಟೆ ಬೆಲೆ ಮೇರೆಗೆ ಆಸ್ತಿಯ ಮೌಲ್ಯ ನಿಗದಿ ಪಡಿಸಲಾಗುತ್ತಿತ್ತು.

ಮೋದಿಗೆ ಖರ್ಗೆ ಪತ್ರ: ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮ್ಮ ಪಕ್ಷದ ಪ್ರಣಾಳಿಕೆ ‘ನ್ಯಾಯ ಪತ್ರ’ದ ಕುರಿತು ವಿವರಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನಿ ತಮ್ಮ ಅಧಿಕಾರಿಗಳ ತಪು್ಪ ಮಾಹಿತಿಯಿಂದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲದ ವಿಚಾರಗಳ ಕುರಿತು ಮಾತನಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಪ್ರಣಾಳಿಕೆ ಕುರಿತು ಮನವರಿಕೆ ಮಾಡಿಸಲು ಭೇಟಿಗೆ ಅವಕಾಶ ಕೇಳಿದ್ದು, ಇದರಿಂದ ಅವರು ತಪು್ಪ ಹೇಳಿಕೆ ನೀಡುವುದು ತಪು್ಪತ್ತದೆ ಎಂದು ಖರ್ಗೆ ಎಕ್ಸ್​ನಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net