ಸುಶಾಂತ್​​ಗೆ ನಿರ್ಮಾಪಕ ಅಭಿಷೇಕ್ ದಂಪತಿ ಹೇಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ ಗೊತ್ತಾ?

Sushant JPG
Published on

ನವದೆಹಲಿ: ಕೈ ಪೊ ಚೆ (2013) ಚಿತ್ರದ ಮೂಲಕ ಬಾಲಿವುಡ್‌ಗೆ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಪರಿಚಯಿಸಿದ ನಿರ್ಮಾಪಕ ಅಭಿಷೇಕ್ ಕಪೂರ್ ಹಾಗೂ ಅವರ ಪತ್ನಿ ಪ್ರಜ್ಞಾ ಕಪೂರ್, ಅಗಲಿದ ನಟನಿಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ.
ಸುಶಾಂತ್ ನೆನಪಿಗಾಗಿ ಅವರು 3,400 ಬಡ ಕುಟುಂಬಗಳಿಗೆ ತಮ್ಮ ಏಕ್ ಸಾಥ್ ಎಂಬ ಎನ್​​ಜಿಒ ಮೂಲಕ ಆಹಾರ ಪೂರೈಸಲಿದ್ದಾರೆ.

ಈ ವಿಷಯವನ್ನು ಇನ್​​ಸ್ಟಾಗ್ರಾಮ್​​​ ಪೋಸ್ಟ್​​​ನಲ್ಲಿ ಹಂಚಿಕೊಂಡ ಪ್ರಜ್ಞಾ, “ಇದು ಸುಶಾಂತ್ ಮತ್ತು ಅವರ ಕೌಶಲ, ಸಾಧನೆಯನ್ನು ಗೌರವಿಸುವ ವಿಧಾನ, ಅವರು ಎಲ್ಲವನ್ನೂ ಸಾಧಿಸಿದ್ದಾರೆ. ಅವರ ಸ್ನೇಹಿತರಾದ ನಮಗೆ ಅವರ ಸಾಧನೆಯನ್ನು ಸಂಭ್ರಮಿಸಲು ಇದು ಹೆಚ್ಚು ಖುಷಿ ನೀಡುತ್ತದೆ” ಎಂದು ಅವರು ತಿಳಿಸಿದ್ದಾರೆ.
ಜೂನ್ 15 ರಂದು ಪವನ್ ಹಂಸ್ ಶವಾಗಾರದಲ್ಲಿ ನಡೆದ ಸುಶಾಂತ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಚಿತ್ರರಂಗದ ಕೆಲವೇ ಕೆಲವರ ಪೈಕಿ ಅಭಿಷೇಕ್ ಮತ್ತು ಪ್ರಜ್ಞಾ ಕೂಡ ಇದ್ದರು.

ಇದಕ್ಕೂ ಮೊದಲು ಅಭಿಷೇಕ್ ಸುಶಾಂತ್ ಅವರಿಗೆ ಹೃತ್ಪೂರ್ವಕ ನುಡಿಗಳನ್ನು ಬರೆದಿದ್ದಾರೆ. ನನ್ನ ಆತ್ಮೀಯ ಸ್ನೇಹಿತನ ಅಗಲಿಕೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ ಮತ್ತು ತುಂಬ ದುಃಖಿತನಾಗಿದ್ದೇನೆ. ನಾವು ಒಟ್ಟಿಗೆ ಎರಡು ವಿಶೇಷ ಚಲನಚಿತ್ರಗಳನ್ನು ಮಾಡಿದ್ದೇವೆ. ಸುಶಾಂತ್ ಒಬ್ಬ ಉದಾರ ಮತ್ತು ಅಸಾಧಾರಣ ನಟರಾಗಿದ್ದರು, ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಲು ಕಠಿಣ ಶ್ರಮಪಟ್ಟರು. ಅವರ ಅಗಲಿಕೆ ತೀವ್ರ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್​​​ನಲ್ಲಿ ಬರೆದಿದ್ದಾರೆ.

ಕಾಯ್ ಪೊ ಚೆ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ ನಂತರ 2018ರಲ್ಲಿ ಸುಶಾಂತ್ ಅಭಿನಯದ ಕೇದಾರನಾಥ ಚಿತ್ರವನ್ನು ಅಭಿಷೇಕ್ ನಿರ್ದೇಶಿಸಿದ್ದಾರೆ. ಸಾರಾ ಅಲಿ ಖಾನ್ ಅವರ ಬಾಲಿವುಡ್ ಚೊಚ್ಚಲ ಚಿತ್ರ ಇದಾಗಿದೆ.
ಪ್ರಜ್ಞಾ ಇನ್​​ಸ್ಟಾಗ್ರಾಮ್​​ನಲ್ಲಿ ಸುಶಾಂತ್ ಅವರೊಂದಿಗಿನ ಫೋಟೋ ಹಂಚಿಕೊಂಡು ಅವರಿಗಾಗಿ ಕಂಬನಿ ಮಿಡಿದಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net