

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹಿಂದೆಂದಿಗಿಂತಲೂ ತೀವ್ರ ವೇಗದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಏಳು ರಾಜ್ಯಗಳಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಮಾತ್ರವಲ್ಲದೇ, ಬೇರೆ ರಾಜ್ಯಗಳಿಗೂ ಇಲ್ಲಿಂದಲೇ ವ್ಯಾಪಿಸುತ್ತಿದೆ. ಈ ಕಾರಣಕ್ಕಾಗಿಯೇ ಬೇರೆ ರಾಜ್ಯಗಳ ಪ್ರಯಾಣಿಕರನ್ನು ಗಡಿಯೊಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ.
ಕೇಂದ್ರ ಸರ್ಕಾರ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಿ ಬಸ್, ರೈಲು, ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತಿದೆ. ಆದರೆ, ನಮ್ಮನ್ನು ಸಂಪರ್ಕಿಸದೇ ಇಂಥ ನಿಯಮಗಳನ್ನು ಹೇರಬೇಡಿ ಎಂದು ರಾಜ್ಯಗಳು ಕೂಡ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತಿವೆ.
ಸದ್ಯ ಬೇರೆ ರಾಜ್ಯಗಳಿಂದ ಯಾರೇ ಬಂದರೂ ಹಣ ಪಾವತಿಸಿ ಕ್ವಾರಂಟೈನ್ಗೆ ಒಳಗಾಗಲೇಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಅಸ್ಸಾಂ, ಜಮ್ಮು ಕಾಶ್ಮೀರ ಆಗೂ ಕರ್ನಾಟಕದಲ್ಲಿ ಪೇಯ್ಡ್ ಕ್ವಾರಂಟೇನ್ ಕಡ್ಡಾಯ. ಇದು ಅಂತಾರಾಜ್ಯ ಪ್ರಯಾಣಕ್ಕೆ ತೊಡಕಾಗಿ ಪರಿಣಮಿಸಿದೆ. ಜತೆಗೆ, ದೇಶೀಯ ವಿಮಾನ ಸಂಚಾರ ಪುನಾರಂಭದ ಮೇಲೂ ಕರಿನೆರಳಾಗಿ ಪರಿಣಮಿಸಿದೆ.
ಹೀಗಾಗಿ, ಆರೋಗ್ಯ ಸೇತು ಆ್ಯಪ್ನಲ್ಲಿ ಸುರಕ್ಷಿತ ಎಂದು ತೋರಿಸುವ ಪ್ರಯಾಣಿಕರನ್ನು ಅಥವಾ ಕಾಯಿಲೆಯ ಲಕ್ಷಣ ಹೊಂದಿಲ್ಲದವರಿಗೆ ಸಾಂಸ್ಥಿಕ ಕ್ವಾರಂಟೇನ್ ಅಗತ್ಯವಿಲ್ಲವೆಂದು ಕೇಂದ್ರ ವಿಮಾನ ಯಾನ ಸಚಿವ ಹರ್ದೀಪ್ ಪುರಿ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ರೈಲ್ವೆ ಪ್ರಯಾಣಿಕರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸಲಾಗಿದೆ. ಜತೆಗೆ ಅಂತಾರಾಜ್ಯ ಪ್ರಯಾಣಿಕರು ಈ ಆ್ಯಪ್ ಹೊಂದಿರಬೇಕೆಂದು ತಿಳಿಸಲಾಗಿದೆ.
ಇದನ್ನೂ ಓದಿ; ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್ ಕೋಡ್ ಟಿಕೆಟ್
ಕೇಂದ್ರ ಸರ್ಕಾರಿ ನೌಕರರು ಕರ್ತವ್ಯಕ್ಕೆ ತೆರಳುವ ಮುನ್ನ ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ಗಳಲ್ಲಿ ಆರೋಗ್ಯ ಸೇತು ಇನ್ಸ್ಟಾಲ್ ಮಾಡಿಕೊಳ್ಳುವುದನ್ನು ಈಗಾಗಲೇ ಕಡ್ಡಾಯಗೊಳಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಮನೆಯಿಂದ ಹೊರ ಹೋಗುವ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವ, ಸೋಂಕಿನಿಂದ ದೂರವಿರಲು ಈ ಆ್ಯಪ್ ಬಳಕೆ ಅಗತ್ಯವಾಗಿದೆ ಎಂಬುದು ಸಾಬೀತಾಗುತ್ತಿದೆ.
ಇನ್ನುಮುಂದೆ ಟೋಲ್ ಗೇಟ್ಗಳಲ್ಲಿ ಶುಲ್ಕ ಪಾವತಿಸುವಂತೆಯೇ ಈ ಆ್ಯಪ್ನಲ್ಲಿ ಸುರಕ್ಷಿತ ಎಂದಿರುವುದು ಕೂಡ ಅಷ್ಟೇ ಅಗತ್ಯವೆನಿಸಲಿದೆ.