ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ! ತನಿಖೆಯಲ್ಲಿ ಕಿಲಾಡಿ ಲೇಡಿಯ ಕರಾಳ ಮುಖ ಬಯಲು

Kiladi Lady Rasheeda
Published on

ವಿಜಯವಾಡ: ಇತ್ತೀಚಿನ ದಿನಗಳಲ್ಲಿ ಮದುವೆಯ ಹೆಸರಲ್ಲಿ ಮೋಸ ಹೋಗುವವರು ಮತ್ತು ಮೋಸ ಮಾಡುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಯುವತಿಯರು, ಯುವಕರು ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ವಂಚನೆಯ ಬಲೆಗೆ ಬೀಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಎಂಟು ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಮುನ್ನೆಲೆಗೆ ಬಂದಿದೆ.

ನಾಲ್ಕು ರಾಜ್ಯಗಳಲ್ಲಿ ವಂಚನೆ

ಮಹಾವಂಚಕಿಯ ಹೆಸರು ರಶೀದಾ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯುವತಿ ಮದುವೆ ಹೆಸರಲ್ಲಿ ಯುವಕರನ್ನು ಯಾಮಾರಿಸಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ರಶೀದಾಗೆ ಇನ್​ಸ್ಟಾಗ್ರಾಂ ಮೂಲಕ ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲ ಮೂಲದ ಫೈನಾನ್ಶಿಯರ್​ ಮೂರ್ತಿ ಎಂಬುವರ ಪರಿಚಯವಾಗಿತ್ತು. ಹಲವು ತಿಂಗಳುಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿ ರಶೀದಾ ಮದುವೆ ಆಗುವ ಬಯಕೆಯನ್ನು ಮೂರ್ತಿ ಮುಂದೆ ವ್ಯಕ್ತಪಡಿಸಿದಳು.

ಹುಡುಗಿ ನೋಡಲು ಸುಂದರವಾಗಿದ್ದರಿಂದ ಮೂರ್ತಿ ಕೂಡ ಮರುಮಾತಾಡದೆ ಮದುವೆ ಓಕೆ ಎಂದರು. ಇಬ್ಬರ ಮದುವೆ ಕಳೆದ ಮಾರ್ಚ್​ 30ರಂದು ನಡೆದಿತ್ತು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ರಶೀದಾ ಇದ್ದಕ್ಕಿಂದ್ದಂತೆ ಮಾಯವಾದಳು. ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಾಣೆಯಾಗಿರುವುದನ್ನು ನೋಡಿ, ತಾನು ಮೋಸ ಹೋಗಿರುವುದು ಸಹ ಮೂರ್ತಿಗೆ ಅರ್ಥವಾಯಿತು. ಬಳಿಕ ಸ್ಥಳೀಯ ಠಾಣೆಗೆ ಆಕೆಯ ವಿರುದ್ಧ ದೂರು ನೀಡಿದರು.

ತನಿಖೆಯಲ್ಲಿ ಲೇಡಿಯ ವಂಚನೆ ಬಯಲು

ಮೂರ್ತಿ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ರಶೀದಾಳ ಅಸಲಿ ಮುಖ ಬಯಲಾಯಿತು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು, ಆರ್ಥಕವಾಗಿ ಸದೃಢರಾದ ಅವಿವಾಹಿತ ಹುಡುಗರನ್ನು ಟಾರ್ಗೆಟ್​ ಮಾಡಿ, ಪರಿಚಯಿಸಿಕೊಂಡು, ಪ್ರೀತಿಯ ಹೆಸರಲ್ಲಿ ನಂಬಿಸಿ ಮದುವೆಯಾಗಿ ವಂಚನೆ ಮಾಡುತ್ತಿದ್ದಳು ಎಂಬುದು ಬಯಲಾಗಿದೆ.

ಅಂದಹಾಗೆ ಆರೋಪಿ ರಶೀದಾ ನೀಲಗಿರಿ ಮೂಲದವಳು. ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net