

ನವದೆಹಲಿ: ಟೊಮ್ಯಾಟೊ ದರ ಗಗನಮುಖಿ ಯಾಗಿರುವ ಕಾರಣ ಅದನ್ನು ರಿಯಾಯಿತಿ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟದ (ಎನ್ಸಿಸಿಎಫ್) ಮೂಲಕ ಖರೀದಿಸಲು ಕೇಂದ್ರ ಸರ್ಕಾರ ಸೂಚಿಸಿದೆ.
ಟೊಮ್ಯಾಟೊ ಹೆಚ್ಚಾಗಿ ಬೆಳೆಯುವ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ಖರೀದಿ ನಡೆಸಿ, ಅಧಿಕವಾಗಿ ಟೊಮ್ಯಾಟೊ ಬಳಕೆ ಮಾಡುವ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುವುದು. ದೆಹಲಿ ಎನ್ಸಿಆರ್ನಲ್ಲಿ ಈ ರೀತಿಯ ಮಾರಾಟ ಜುಲೈ 14ರಿಂದ ನಡೆಯಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ತಿಳಿಸಿದೆ. ಮಳೆ ಕಾರಣ ಟೊಮ್ಯಾಟೊ ಬೆಳೆ ಹಾನಿಯಾಗಿರುವುದು ಮತ್ತು ಸಂಚಾರ ಅಡಚಣೆಯ ಕಾರಣ ಪೂರೈಕೆ ಆಗದಿರು ವುದು ಬೆಲೆ ಹೆಚ್ಚಳಕ್ಕೆ ಕಾರಣ. ದೆಹಲಿಗೆ ಕರ್ನಾಟಕದ ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿಗಳಿಂದ ಬಹುತೇಕ ಟೊಮ್ಯಾಟೊ ಪೂರೈಕೆ ಆಗುತ್ತಿದೆ. ಹಿಮಾಚಲದಿಂದ ಬರಬೇಕಾದ ಫಸಲಿಗೆ ಮಳೆ ಅಡ್ಡಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣದುಬ್ಬರ ಶೇ. 4.81ಕ್ಕೆ ಏರಿಕೆ: ಜೂನ್ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇ. 4.81ಕ್ಕೆ ಹೆಚ್ಚಳ ಆಗಿದೆ. ಇದು ಮೇ ತಿಂಗಳಲ್ಲಿ ಶೇ. 4.25 ಇತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಹೇಳಿದೆ. ಆಹಾರ ಪದಾರ್ಥದ ಹಣದುಬ್ಬರ ಶೇ. 4.49 ಇದ್ದು, ಮೇ ತಿಂಗಳಲ್ಲಿ ಇದು ಶೇ. 2.91 ಇತ್ತು. ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಶೇ. 4.72 ಇದ್ದರೆ, ನಗರ ಭಾಗದಲ್ಲಿ ಇದು ಶೇ. 4.96 ಮುಟ್ಟಿದೆ. ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿತ ಹಣದುಬ್ಬರ ಪ್ರಮಾಣ ಶೇ. 2ರಿಂದ 6 ಪ್ರಮಾಣದಲ್ಲಿ ಇರಬೇಕು ಎಂಬುದು ಆರ್ಬಿಐ ಆಶಯವಾಗಿದೆ.
ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ: ಇದು ಅಚ್ಛೆ ದಿನ, ಅಮೃತ ಕಾಲ್, ಕರ್ತವ್ಯ ಕಾಲ್ ಅಲ್ಲ. ಲೂಟ್ ಕಾಲ್ (ಕೊಳ್ಳೆಹೊಡೆಯುವ ಸಮಯ) ಆಗಿದೆ ಎಂದು ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನದ ಅಗತ್ಯ ವಸ್ತುಗಳು, ತರಕಾರಿ ಬೆಲೆ ಹಚ್ಚಾಗಲು ಮೋದಿ ಸರ್ಕಾರದ ದುರ್ನೀತಿಗಳೇ ಕಾರಣ. ಸರ್ಕಾರ ಮಾರುಕಟ್ಟೆಯ ಕಾರ್ಯತಂತ್ರವಾಗಿ ದೊಡ್ಡ ದೊಡ್ಡ ಪದಗಳನ್ನು ಬಳಸುತ್ತದೆ. ಆದರೆ, ಜನರನ್ನು ಲೂಟಿ ಮಾಡುವ ಕಾಲ ಮುಂದುವರಿದಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಬೌನ್ಸರ್ ನೇಮಿಸಿದ್ದವನ ಸೆರೆ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಟೊಮ್ಯೂಟೊ ಮಾರಾಟ ಮಾಡಲು ಇಬ್ಬರು ಬೌನ್ಸರ್ಗಳನ್ನು ನೇಮಕ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತಅಜಯ್ ಫೌಜಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೌಜಿಗೆ ನೆರವು ನೀಡುತ್ತಿದ್ದ ಆಪಾದನೆ ಮೇಲೆ ಅವರ ಸಂಬಂಧಿಗಳಿಬ್ಬರನ್ನು ಬಂಧಿಸಲಾಗಿದೆ. ಟೊಮ್ಯಾಟೊ ಮಾರಾಟದ ವೇಳೆ ಚೌಕಾಸಿ ಮಾಡುವ ಗ್ರಾಹಕರನ್ನು ಹೊರಹಾಕಲು ಬೌನ್ಸರ್ಗಳನ್ನು ಈತ ನೇಮಿಸಿಕೊಂಡಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.