ಸೆಖೆಯಾಗ್ತಿದೆ ಎಂದು ಮನೆಯ ಹೊರಗೆ ಹೋದವ ಶವವಾಗಿ ಪತ್ತೆ! ಬೆಚ್ಚಿಬೀಳಿಸುತ್ತೆ ನಿನ್ನೆ ರಾತ್ರಿಯ ಘಟನೆ

murder
Published on

ರಾಯಚೂರು: ಮದುವೆ ಮಾಡಿಕೊಳ್ಳಲೆಂದು ಆತ ಹೆಣ್ಣು ಹುಡುಕುತಿದ್ದ. ಎರಡು ದಿನದ ಹಿಂದೆ ಮಾರಮ್ಮ ದೇವಿಗೆ ಪೂಜೆಯನ್ನೂ ಮಾಡಿಸಿದ್ದ. ಯಾವುದೇ ಅಡ್ಡಿ-ಆತಂಕವಿಲ್ಲದೆ ಮಗನಿಗೆ ಒಳ್ಳೆಯ ಜೀವನ ಸಿಗಲೆಂದು ಆತನ ತಾಯಿಯೂ ದೇವರಲ್ಲಿ ಬೇಡಿಕೊಂಡಿದ್ದರು. ಆದರೆ, ನಿನ್ನೆ ರಾತ್ರಿ ಆ ಯುವಕ ದುರಂತ ಅಂತ್ಯಕಂಡಿದ್ದಾನೆ.

ರಾಯಚೂರು ತಾಲೂಕಿನ ಮರ್ಚಡ್ ಗ್ರಾಮದ ತಾಯಪ್ಪ(26) ಮೃತ ದುರ್ದೈವಿ. ನಿನ್ನೆ ರಾತ್ರಿ ವಿದ್ಯುತ್ ಇಲ್ಲದ ಕಾರಣಕ್ಕೆ ಸೆಖೆಯೆಂದು ಮನೆಯ ಹೊರಗೆ ಮಲಗುವುದಾಗಿ ಹೋಗಿದ್ದ. ದೇವಸ್ಥಾನದ ಬಳಿ ಕೆಲ ಹೊತ್ತು ಕುಳಿತ್ತಿದ್ದ ಎನ್ನಲಾಗಿದೆ. ಆದರೆ ಆ ರಾತ್ರಿಯೇ ಮನೆ ಬಾಗಿಲ ಸಮೀಪದಲ್ಲೇ ಕಿಡಿಗೇಡಿಗಳು ಆತನ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದ ಸ್ಥಳಕ್ಕೆ ಬಂದ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net