

ಇಂಗ್ಲೆಂಡ್: ಕ್ಯಾನ್ಸರ್ ಎಂದಾಕ್ಷಣ ಒಮ್ಮೆಲೆ ಎಲ್ಲರೂ ಭಯ ಪಡುತ್ತಾರೆ. ಕ್ಯಾನ್ಸರ್ಗೆ ಚಿಕಿತ್ಸೆಯಿದೆಯಾದರೂ, ಅದನ್ನು ಗೆದ್ದು ಬದುಕುವವರು ಎಲ್ಲೋ ಕೆಲವರು ಮಾತ್ರ. ಅದೇ ರೀತಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ಸ್ನೇಹಿತೆಗೆ ಆಕೆಯ ಆಸೆಯಂತೆ ಅದ್ಧೂರಿ ಮದುವೆ ಮಾಡಿಸಿದ ಸ್ನೇಹಿತರು ಇದೀಗ ನಂಬಲಾಗದ ಶಾಕ್ನಲ್ಲಿದ್ದಾರೆ. ಸ್ನೇಹಿತೆಯನ್ನು ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ.
ಇಂಗ್ಲೆಂಡ್ನ 29 ವರ್ಷದ ಟೋನಿ ಸ್ಟ್ಯಾಂಡನ್ಗೆ ಕ್ಯಾನ್ಸರ್ ಇರುವುದಾಗಿ ಆಕೆ 2015ರಲ್ಲಿ ತನ್ನ ಸ್ನೇಹೊತರಿಗೆ ಹೇಳಿಕೊಂಡಿದ್ದಳು. ರೋಗದಿಂದ ತಾನು ಹೇಗೆ ಬಳಲುತ್ತಿದ್ದೇನೆ ಎನ್ನುವುದನ್ನು ಆಗಾಗ ಸ್ನೇಹಿತರಿಗೆ ತಿಳಿಸುತ್ತಿದ್ದಳು. ಕೂದಲು ಕೂಡ ಉದುರಿಹೋಗಿತ್ತು. ಆಕೆಗೆ ಅದ್ಧೂರಿ ಮದುವೆಯಾಗಬೇಕೆಂದು ಆಸೆಯಿತ್ತಂತೆ. ಅದನ್ನ ತನ್ನ ಸ್ನೇಹಿತರ ಬಳಿ ಹೇಳಿದ್ದಳು. ಕ್ಯಾನ್ಸರ್ನಿಂದ ಬಳಲಿರುವ ಸ್ನೇಹಿತೆಯ ಆಸೆ ಈಡೇರಿಸುವ ನಿಟ್ಟಿನಲ್ಲಿ ಆಕೆಯ ಸ್ನೇಹಿತರು ಸಾರ್ವಜನಿಕರದಲ್ಲಿ ಹಣ ಸಂಗ್ರಹಿಸಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ. 8344 ಪೌಂಡ್ (8.5 ಲಕ್ಷ ರೂಪಾಯಿ) ಹಣ ಸಂಗ್ರಹಿಸಲಾಗಿದೆ. ಅದರ ಜತೆ ಬಿಜಿನೆಸ್ಮೆನ್ ಒಬ್ಬ 2000 ಪೌಂಡ್ ಸಹಾಯ ನೀಡಿದ್ದಾನೆ. ಈ ಹಣದಲ್ಲಿ ಅದ್ಧೂರಿ ಮದುವೆ ಮಾಡುವುದರ ಜತೆ ಆಕೆಗೆ ಒಂದು ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.
ಟೋನಿಯ ತಂದೆ ಕೂಡ ಕ್ಯಾನ್ಸರ್ನಿಂದ ಬಳಲಿದ್ದು, ಆಕೆಯ ಮದುವೆಗೆ ಸ್ವಲ್ಪ ದಿನವಿರುವಾಗ ಅವರು ತೀರಿಕೊಂಡಿದ್ದರು. ಅವರು ಕೊನೆಯುಸಿರೆಳೆಯುವ ಮುನ್ನ ತಮ್ಮ ಮಗಳಿಗೆಂದು ಒಂದು ವಿಡಿಯೋ ಮಾಡಿದ್ದರು. ಆ ವಿಡಿಯೋವನ್ನು ಮದುವೆಯ ದಿನದಂದು ಎಲ್ಲರೆದುರು ಪ್ರದರ್ಶಿಸಲಾಗಿತ್ತು. ಅದರ ಜತೆ ಫುಟ್ಬಾಲ್ ಆಟಗಾರರೊಬ್ಬರು ಟೋನಿಗೆ ವಿಡಿಯೋ ಮೂಲಕ ವಿಶ್ ಮಾಡಿದ್ದು, ಆ ವಿಡಿಯೋವನ್ನೂ ಮದುವೆಯ ದಿನ ಪ್ರದರ್ಶಿಸಲಾಗಿತ್ತು.
ಮದುವೆಯಾಗಿ ಕೆಲವೇ ದಿನಗಳಲ್ಲಿ ಟೋನಿ ಸ್ನೇಹಿತರಿಗೆ ಮತ್ತೆ ಕರೆ ಮಾಡಿದ್ದಾಳೆ. ನನಗೆ ಕ್ಯಾನ್ಸರ್ ಇರಲೇ ಇಲ್ಲ. ಅದ್ಧೂರಿ ಮದುವೆಯಾಗಬೇಕೆಂಬ ಆಸೆಯಿಂದ ಈ ರೀತಿ ನಾಟಕವಾಡಿದೆ. ಆದರೆ ಈಗ ಒಂದು ಸಮಸ್ಯೆಯಾಗಿದೆ. ನನ್ನ ಗಂಡನಿಗೆ ನಾನು ನಾಟಕವಾಡಿದ ವಿಚಾರ ತಿಳಿದುಬಿಟ್ಟಿದೆ. ಇದೀಗ ಅವರು ಡೈವೋರ್ಸ್ ನೀಡಲು ಮುಂದಾಗಿದ್ದಾರೆ. ದಯಮಾಡಿ ನನಗೆ ಸಹಾಯ ಮಾಡಿ ಎಂದು ಆಕೆ ಕೇಳಿಕೊಂಡಿದ್ದಾಳೆ. ಆಕೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡ ಸ್ನೇಹಿತರು ಅದನ್ನು ಸಾರ್ವಜನಿಕಗೊಳಿಸಿದ್ದಾರೆ. ಇದೀಗ ಟೋನಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಕೆಗೆ ಐದು ತಿಂಗಳ ಜೈಲುಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. (ಏಜೆನ್ಸೀಸ್)