

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ? ಎಂಬ ಕುತೂಹಲಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ತೆರೆ ಎಳೆದಿದ್ದಾರೆ.
ಜೆಡಿಎಸ್ ಹಾಸನ, ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದರೆ ಜೆಡಿಎಸ್ ಸ್ಪರ್ಧಿಸಿಲ್ಲ. ಹಾಗಾಗಿ ಆ ಕ್ಷೇತ್ರಗಳಿಗೆ ಬಿಜೆಪಿಯೂ ಬೆಂಬಲ ಕೋರಿತ್ತು. ಅದಕ್ಕೆ ಪ್ರತಿಯಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಬಿಜೆಪಿ ಬೆಂಬಲ ನಿಡಲಿದೆ ಎಂಬ ಊಹಾಪೋಹವೂ ಹರಿದಾಡಿತ್ತು. ಇದೆಲ್ಲಕ್ಕೂ ಎಚ್ಡಿಕೆ ತೆರೆ ಎಳೆದಿದ್ದು. ಬಿಜೆಪಿಗೆ ಬೆಂಬಲ ನೀಡುವುದು ಸ್ಥಳೀಯ ಜೆಡಿಎಸ್ ಮುಖಂಡರಿಗೆ ಬಿಟ್ಟದ್ದು. ಕೆಲವು ಕಡೆ ಬಿಜೆಪಿ, ಕೆಲವು ಕಡೆ ಕಾಂಗ್ರೆಸ್ಗೆ ಬೆಂಬಲ ನೀಡುತ್ತೇವೆ ಎಂದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ, ಯಾವ ಒಳ- ಹೊರ ಒಪ್ಪಂದವಿಲ್ಲ. ಯಾವ ಪಕ್ಷಕ್ಕೆ ಬೆಂಬಲ ಕೊಡಬೇಕು ಎಂಬುದನ್ನು ಸ್ಥಳೀಯವಾಗಿ ನಮ್ಮ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. ನಮ್ಮ ಪಕ್ಷ ಭವಿಷ್ಯದ ದೃಷ್ಟಿಯಿಂದ ಜಿಲ್ಲಾ ಘಟಕದ ಮುಖಂಡರ ಅಭಿಪ್ರಾಯ ಕ್ರೋಢೀಕರಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಪಕ್ಷ ಆಯಾ ಕ್ಷೇತ್ರದ ಸ್ಥಿತಿ-ಗತಿ ಆಧರಿಸಿ ಕೆಲವು ಕಡೆ ಬಿಜೆಪಿ, ಮತ್ತೆ ಕೆಲವು ಕಡೆ ಕಾಂಗ್ರೆಸ್ಗೆ ಬೆಂಬಲ ಕೊಡಲಿದೆ ಎಂದರು.
ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ/ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂಬ ಕಪೋಲ ಕಲ್ಪಿತ ವರದಿ ಬಂದವು. ಅದೇ ರೀತಿ ಕಾಂಗ್ರೆಸ್ ನಾಯಕರು ಬಿಜೆಪಿ ಬಿ ಟೀಮ್ ಜೆಡಿಎಸ್ ಎಂದು ಹುಯಿಲೆಬ್ಬಿಸಿದರು. 2018ರ ಚುನಾವಣೆಯಿಂದಲೂ ಅದೇ ಮಾತನ್ನು ಹೇಳುತ್ತಾ ಬಂದಿದ್ದಾರೆ. ಈಗ ಜೆಡಿಎಸ್ ಕುಟುಂಬ ಪಕ್ಷ ಎಂದು ದೂರುತ್ತಿದ್ದಾರೆ. ಜೆಡಿಎಸ್ 6 ಸ್ಥಾನಗಳಿಗೆ ಸ್ಪರ್ಧಿಸಿದೆ. ಉಳಿದ ಸ್ಥಾನಗಳಿಗೆ ಬಿಜೆಪಿಯನ್ನು ಬೆಂಬಲಿಸುತ್ತದೆ ಎನ್ನುತ್ತಿದ್ದಾರೆ. ಬಿಜೆಪಿಯವರು ಈ ಚುನಾವಣೆಯಲ್ಲಿ ನಮ್ಮ ಬೆಂಬಲ ಕೋರಿದ್ದಾರೆ. ಯಡಿಯೂರಪ್ಪ ಕೂಡ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಎಲ್ಲಿ ಅಭ್ಯರ್ಥಿ ಹಾಕಿಲ್ಲವೋ ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಕೇಳಿದ್ದಾರೆ. ಸಿಎಂ ನಮಗೆ ಸಂಬಂಧವಿಲ್ಲ. ಆ ಬಗ್ಗೆ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. ನಾವು ನಿಂತ 6 ಕ್ಷೇತ್ರದಲ್ಲಿ ಮೂರೂ ಪಕ್ಷಗಳ ನಡುವೆ ಪೈಪೋಟಿ ಇದೆ. ನಾವು ಸ್ಪರ್ಧಿಸಿರುವ ಕಡೆ ಯಾವ ಪಕ್ಷದ ಜತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಡಿಕೆ ಸ್ಪಷ್ಟಪಡಿಸಿದರು.
ಕೆಲವು ಜಿಲ್ಲೆಗಳಲ್ಲಿ ನಮ್ಮ ಪಕ್ಷ ನಿರ್ಣಾಯಕ ಸ್ಥಾನದಲ್ಲಿದೆ. ಆರ್ಥಿಕ ಕಾರಣದಿಂದ ನಾವು 6 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿದ್ದೇವೆ. ನಮ್ಮ ಶಕ್ತಿ ಕಡಿಮೆ ಇಲ್ಲ. ಯಾದಗಿರಿ, ಕಲಬುರಗಿಯಲ್ಲಿ ನಮ್ಮ ಮತದಾರರು ಹೆಚ್ಚಿದ್ದಾರೆ. ಹಾಗಾಗಿ ಬಿಜೆಪಿ ನಾಯಕರು ನಮ್ಮ ಬೆಂಬಲ ಕೋರಿದ್ದಾರೆ. 2023ರ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲುವುದು ನಮ್ಮ ಗುರಿ. 224 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಈ ಗುರಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಾವು ಮೇಲ್ಮನೆ ಚುನಾವಣೆಯಲ್ಲಿ ಸ್ಥಳೀಯ ಸ್ಥಿತಿ-ಗತಿ ನೋಡಿಕೊಂಡು ಬೆಂಬಲ ಕೊಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.