

ನವದೆಹಲಿ: ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವ ಜಿ-20 ಶೃಂಗಸಭೆ ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯ ಭಾರತ ಮಂಟಪದಲ್ಲಿ ನಿನ್ನೆಯಿಂದ ಎರಡು ದಿನಗಳ ಕಾಲ ನಡೆಯುತ್ತಿದೆ. ಈ ಮಧ್ಯೆ ಶೃಂಗಸಭೆ ಕುರಿತಂತೆ ಅಪಪ್ರಚಾರವೊಂದು ನಡೆಯುತ್ತಿದೆಯೇ ಎಂಬ ಪ್ರಶ್ನೆಯೊಂದು ಮೂಡಿದೆ.
ಜಿ-20 ಶೃಂಗಸಭೆ ನಡೆಯುತ್ತಿರುವ ಸ್ಥಳದಲ್ಲಿ ಮಳೆನೀರು ತುಂಬಿಕೊಂಡಿದೆ, ಕೆಲವು ಜಾಗಗಳಿಗೆ ನೀರು ನುಗ್ಗಿದೆ. 4000 ಕೋಟಿ ರೂ. ಖರ್ಚು ಮಾಡಿದ್ದರೂ ಯಾಕೆ ಈ ಅವ್ಯವಸ್ಥೆ? ಎಂಬಿತ್ಯಾದಿ ರೀತಿಯಲ್ಲಿ ಕೆಲವು ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ಕುರಿತು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಫ್ಯಾಕ್ಟ್ಚೆಕ್ ವರದಿ ಪ್ರಕಟಿಸಿದೆ.
ಜಿ-20 ಶೃಂಗಸಭೆ ಜಾಗದಲ್ಲಿ ಮಳೆನೀರು ತುಂಬಿಕೊಂಡಿದೆ ಎಂಬ ವಿಡಿಯೋ ಹರಿದಾಡುತ್ತಿದೆ. ಆದರೆ ಅದು ಉತ್ಪ್ರೇಕ್ಷಿತ ಹಾಗೂ ದಿಕ್ಕುತಪ್ಪಿಸುವಂಥ ಪೋಸ್ಟ್ ಆಗಿದೆ. ರಾತ್ರಿಯ ಜೋರು ಮಳೆಯಿಂದ ಸಣ್ಣ ಪ್ರಮಾಣದ ಮಳೆನೀರು ಕೆಲವು ಪ್ರದೇಶಗಳಲ್ಲಿ ಕಂಡುಬಂದಿದೆ, ಅದನ್ನು ಮೋಟರ್ಗಳ ಮೂಲಕ ಹೊರಹರಿಸಲಾಗಿದೆ. ಮುಖ್ಯವಾದ ವೇದಿಕೆ ಬಳಿಕ ಮಳೆನೀರು ಕಂಡುಬಂದಿಲ್ಲ ಎಂದು ಪಿಐಬಿ ಫ್ಯಾಕ್ಟ್ಚೆಕ್ ವರದಿ ಪ್ರಕಟಿಸಿದೆ.