

ಬೆಂಗಳೂರು: ಕರೊನಾ ನಿರೋಧಕ ಲಸಿಕೆ ಅಕ್ರಮಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ. ಸಾರ್ವಜನಿಕರು ವ್ಯಾಕ್ಸಿನ್ ಕಳ್ಳ ದಂಧೆ ಮೇಲೆ ಕಣ್ಣಿಟ್ಟು, ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಹಿಂದೆ ರೆಮ್ ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿತ್ತು. ಕಟ್ಟುನಿಟ್ಟಿನ ಕ್ರಮವಹಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಲಸಿಕೆ ವಿಚಾರದಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆಯಲಿದೆ ಎಂದರು.
ಖಾಸಗಿಯವರು ಹೆಚ್ಚಿನ ದರದಲ್ಲಿ ಲಸಿಕೆ ಮಾರಾಟದ ವಿಷಯದಲ್ಲಿ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಲಾಗದು. ಈ ವಿಷಯದಲ್ಲಿ ಕೇಂದ್ರ ಸರ್ಕಾರವೇ ಏಕರೂಪದ ನೀತಿ ರೂಪಿಸಬೇಕಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಬಿಗಿ ಕ್ರಮಕ್ಕೆ ಸೂಚನೆ: ಕರೊನಾ 2ನೇ ಅಲೆ ಅಬ್ಬರ ತಗ್ಗಿಸಿ, ಸೋಂಕು ನಿಯಂತ್ರಿಸಲು 2ನೇ ಹಂತದ ಲಾಕ್ಡೌನ್ ವಿಸ್ತರಣೆ ಸೋಮವಾರದಿಂದ ಜಾರಿಗೆ ಬಂದಿದ್ದು, ಬಿಗಿಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಹಳ್ಳಿಗಳಲ್ಲಿ ಇದೀಗ ಲಾಕ್ಡೌನ್ ಸರಿಯಾಗಿ ಪಾಲನೆಯಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿ ಇನ್ನಷ್ಟು ಬಿಗಿಯಾಗಬೇಕಾಗಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಲು ಜನರ ಸಹಕಾರವೂ ಮುಖ್ಯವೆಂದು ಬೊಮ್ಮಾಯಿ ಹೇಳಿದರು.