

ಬಳ್ಳಾರಿ: ಯುದ್ಧಪೀಡಿತ ಯೂಕ್ರೇನ್ನ ಕೀವ್ ನಗರದಲ್ಲಿ ಬಳ್ಳಾರಿಯ ಐವರು ಯುವತಿಯರು ಹಾಗೂ ಮೂವರು ಯುವಕರಿಗೆ ಸರಿಯಾಗಿ ಊಟ ಮತ್ತು ನೀರು ಸಿಗದೆ ಪರದಾಡುತ್ತಿದ್ದಾರೆ.
ಬಳ್ಳಾರಿಯ ತಯಾಬ್ ಕೌಸರ್, ಸಭಾ ಕೌಸರ್, ತನೀಷಾ ಮತ್ತು ಹೊಸಪೇಟೆಯ ನಂದಿನಿ, ಹರಪನಹಳ್ಳಿಯ ವಿಕಾಸ್ ಪಾಟೀಲ್, ಗಗನ್ದೀಪ್, ಸಂಜಯ್, ಲಾವಣ್ಯಾ ಅತಂತ್ರರಾಗಿದ್ದಾರೆ. ಇದರಲ್ಲಿ ಲಾವಣ್ಯಾ ಸಂಪರ್ಕಕ್ಕೆ ಸಿಕ್ಕಿದ್ದು 'ರೊಮೇನಿಯಾದಿಂದ ಫ್ಲೈಟ್ ಬುಕ್ ಆಗಿದೆ. ಬುಧವಾರ ಭಾರತಕ್ಕೆ ಬರುತ್ತೇನೆ' ಎಂದು ತಿಳಿಸಿದ್ದಾರೆ. ನಂತರ ಸಂಪರ್ಕ ಕಡಿತವಾಗಿದೆ. ನಾಲ್ಕು ದಿನಗಳಿಂದ ಬಂಕರ್ನಲ್ಲಿದ್ದ ಈ ವಿದ್ಯಾಥಿರ್ಗಳು ಸರಿಯಾದ ಊಟ, ನೀರು ಇಲ್ಲದೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಬಂಕರ್ ತೊರೆಯುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಹೆಚ್ಚಿನ ದಾಳಿ ಸಾಧ್ಯತೆ ಕುರಿತಾಗಿ ಹೇಳಿದ್ದಾರೆ ಎಂದು ಕೆಲ ಯುವತಿಯರು ಆಡಿಯೋ ರೆಕಾರ್ಡ್ ಮಾಡಿ ಪಾಲಕರಿಗೆ ಕಳುಹಿಸಿದ್ದಾರೆ.
ಇದರಿಂದ ಪಾಲಕರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೊಸಪೇಟೆಯ ನಂದಿನಿ ಎಂಬುವರು ಹಂಗೇರಿಯಾ ಗಡಿ ಕಡೆ ಹೊರಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. 'ನಾನು ಟೆನ್ ಹತ್ತಿದ್ದೇನೆ. ಗಡಿಗಳನ್ನು ದಾಟಿದ ಮೆಸೇಜ್ ಮಾಡುವೆ' ಎಂದು ತಿಳಿಸಿದ್ದಾರೆ.