

ಕೀವ್: ಯೂಕ್ರೇನ್ ಮೇಲೆ ರಷ್ಯಾ ಪಡೆಯ ಭೀಕರ ದಾಳಿ ಮುಂದುವರಿದಿದ್ದು, ಅಪಾರ ಪ್ರಮಾಣದ ಸಾವು-ನೋವು ಉಂಟು ಮಾಡುತ್ತಿರುವ ಜತೆಗೆ ಯೂಕ್ರೇನ್ನ ಪ್ರಮುಖ ಸ್ಥಳಗಳನ್ನೂ ಭಷ್ಮ ಮಾಡುತ್ತಿದೆ. ಇದೀಗ ವಿಶ್ವದ ಅತಿದೊಡ್ಡ ವಿಮಾನವನ್ನೂ ರಷ್ಯಾ ಹೊಡೆದುರುಳಿಸಿದೆ.
ವಿಶ್ವದ ಅತಿದೊಡ್ಡ ವಿಮಾನ, ಯೂಕ್ರೇನ್ಗೆ ಸೇರಿದ 'ಆಂಟೊನೊವ್-225'(AN-225) ಸರಕು ವಿಮಾನವನ್ನು ರಷ್ಯಾದ ಸೇನಾ ಪಡೆಗಳು ಕೀವ್ ಹೊರವಲಯದಲ್ಲಿ ಭಾನುವಾರ ನಾಶ ಮಾಡಿವೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಈ ವಿಮಾನಕ್ಕೆ 'ಮ್ರಿಯಾ' ಎಂದು ಯೂಕ್ರೇನ್ ಹೆಸರಿಟ್ಟಿತ್ತು. ಯೂಕ್ರೇನಿಯನ್ ಭಾಷೆಯಲ್ಲಿ ಇದರ್ಥ ಕನಸು.
ಜಗತ್ತಿನಲ್ಲೇ ಅತ್ಯಂತ ವಿಶೇಷ ಎನಿಸಿದ್ದ ಈ ವಿಮಾನವು 84 ಮೀಟರ್ ಉದ್ದ ಇತ್ತು. ಗಂಟೆಗೆ 850 ಕಿಲೋ ಮೀಟರ್ವೇಗದಲ್ಲಿ 250 ಟನ್ ತೂಕ ಸರಕು ಸಾಗಿಸಬಲ್ಲ ಶಕ್ತಿ ಹೊಂದಿತ್ತು. ಮ್ರಿಯಾವನ್ನು ರಿಪೇರಿ ಮಾಡಲು ಸುಮಾರು 3 ಶತಕೋಟಿ ಡಾಲರ್(22,713 ಕೋಟಿ) ವೆಚ್ಚ, ಹಾಗೂ 5 ವರ್ಷ ಸಮಯ ಬೇಕಾಗುತ್ತೆ ಎಂದು ಯೂಕ್ರೇನ್ ಸರ್ಕಾರಿ ಸ್ವಾಮ್ಯದ, ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ 'ಉಕ್ರೋಬೊರೊನ್ಪ್ರೊಮ್' ಅಂದಾಜಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯೂಕ್ರೇನ್ ಸರ್ಕಾರ, ರಷ್ಯಾ ನಮ್ಮ ವಿಮಾನ 'ಮ್ರಿಯಾ'ವನ್ನು ನಾಶ ಮಾಡಿಸಬಹುದು. ಆದರೆ, ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ. ನಾವು ಮತ್ತೆ ನಮ್ಮ ಕನಸನ್ನು ನಿರ್ಮಿಸುವ ಮೂಲಕ ಮತ್ತಷ್ಟು ಬಲಿಷ್ಠ, ಮುಕ್ತ ಹಾಗೂ ಪ್ರಜಾಪ್ರಭುತ್ವದ ಯೂಕ್ರೇನ್ ಅನ್ನು ರೂಪಿಸುತ್ತೇವೆ. ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ' ಎಂದು ಟ್ವೀಟ್ ಮಾಡಿದೆ.