

ವಡೋದರಾ: ಟ್ಯೂಷನ್ ಹೇಳಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಮೂರು ತಿಂಗಳ ಕಾಲ ಸತತವಾಗಿ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ನ ವಡೋದರಾದಲ್ಲಿ ನಡೆದಿದೆ. ಎರಡು ವರ್ಷದ ಹಿಂದಿನ ಪ್ರಕರಣದ ತೀರ್ಪು ಇದೀಗ ಬಂದಿದ್ದು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ವಿನು ಕಟಾರಿಯಾ ಇದೀಗ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತ ತನ್ನ ಮನೆಯಲ್ಲೇ ಟ್ಯೂಷನ್ ಹೇಳಿಕೊಡುವುದಾಗಿ 16 ವರ್ಷದ ಬಾಲಕಿಯನ್ನು 2018ರಲ್ಲಿ ಮನೆಗೆ ಕರೆಸಿಕೊಳ್ಳುತ್ತಿದ್ದ. ಬಾಲಕಿಯನ್ನು ರೇಪ್ ಮಾಡಿ ಅದರ ವಿಡಿಯೋ ಮಾಡಿಟ್ಟುಕೊಂಡಿದ್ದ. ಜನವರಿಯಿಂದ ಮಾರ್ಚ್ ತಿಂಗಳಲ್ಲಿ ಅಹಮದಾಬಾದ್, ಸೂರತ್ ಮತ್ತು ಪಾದ್ರಾ ನಗರಗಳ ಹೋಟೆಲ್ಗಳಿಗೆ ಬಾಲಕಿಯನ್ನು ಕರೆಸಿಕೊಂಡು ರೇಪ್ ಮಾಡಿದ್ದಾನೆ. ನೀನು ಬರದೇ ಇದ್ದರೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ಹೆದರಿದ ಬಾಲಕಿ ಆತ ಹೇಳಿದಂತೆ ಮಾಡಿದ್ದಾಳೆ.
ಇದೀಗ ನ್ಯಾಯಾಲಯದ ಎದುರು ಆರೋಪಿಯ ವಿರುದ್ಧದ ಎಲ್ಲ ಸಾಕ್ಷಿ ಮಂಡಿಸಲಾಗಿದೆ. ಅಪರಾಧ ಸಾಬೀತಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. (ಏಜೆನ್ಸೀಸ್)