ಅಪ್ಪ ಅಮ್ಮನನ್ನ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟ ಕ್ರೂರಿ ಮಗ-ಸೊಸೆ; ಹಸಿವಿನಿಂದ ತಂದೆ ಸಾವು

ಚೊಉಪಲೆ
Published on

ತಿರುವನಂತಪುರಂ: ಹೆತ್ತು ಹೊತ್ತು ಸಾಕಿದ್ದ ಅಪ್ಪ-ಅಮ್ಮನನ್ನು ಪಾಪಿ ಮಗನೊಬ್ಬ ಕೋಣೆಯೊಳಗೆ ಕೂಡಿ ಹಾಕಿ ಸಾಯಿಸಲು ಪ್ರಯತ್ನಿಸಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. 80 ವರ್ಷದ ತಂದೆ ಮೃತನಾಗಿದ್ದು, ತಾಯಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಕೊಟ್ಟಾಯಂನ ಮುಂಡಕ್ಕಾಯಂ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮೃತನನ್ನು ಪೊಡಿಯನ್ (80) ಎಂದು ಗುರುತಿಸಲಾಗಿದೆ. ಅವರ ಪತ್ನಿ ಅಮ್ಮಿನಿಯನ್ನು (76) ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮನೋವೈದ್ಯಕೀಯ ವಾರ್ಡ್‌ಗೆ ದಾಖಲಿಸಲಾಗಿದೆ.

ವೃದ್ಧ ದಂಪತಿ ತಮ್ಮ ಕಿರಿಯ ಮಗ ರೆಜಿ ಮತ್ತು ಸೊಸೆಯೊಂದಿಗೆ ಗ್ರಾಮದಲ್ಲಿ ತಂಗಿದ್ದರು. ಅವರನ್ನು ಒಂದು ಕೋಣೆಯೊಳಗೆ ಕೂಡಿ ಹಾಕಲಾಗಿತ್ತು. ಊಟ, ಔಷಧ ಏನೂ ಕೊಡದೆ ನರಳಾಡುವಂತೆ ಮಾಡಲಾಗಿತ್ತು. ಮಗ ಸೊಸೆ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ತಾವು ಕೆಲಸಕ್ಕೆ ಯಾರೂ ವೃದ್ಧರನ್ನು ಭೇಟಿಯಾಗಬಾರದು ಎನ್ನುವ ಕಾರಣಕ್ಕೆ ಮನೆಯ ಬಾಗಿಲಿಗೆ ನಾಯಿಯನ್ನು ಕಟ್ಟಿ ಹೋಗುತ್ತಿದ್ದರು. ಯಾರಾದರೂ ಮನೆಯ ಹತ್ತಿರ ಹೋದರೆ ರೆಜಿ ಕುಡಿದು ಬಂದು ಅವರೊಂದಿಗೆ ಜಗಳವಾಡುತ್ತಿದ್ದನಂತೆ. ಆ ಭಯದಿಂದ ಊರವರು ಯಾರೂ ಆತನ ಮನೆಯ ಕಡೆ ಸುಳಿದಿಲ್ಲ. ದಂಪತಿಯ ಹಿರಿಯ ಮಗ ರಘು ಮನೆಯಿಂದ ದೂರದಲ್ಲಿರುವ ಯೆಂಡಾಯಾರ್‌ನಲ್ಲಿ ವಾಸಿಸುತ್ತಾನೆ. ಮನೆಯಲ್ಲಿ ವೃದ್ಧ ದಂಪತಿಯನ್ನು ಕೂಡಿ ಹಾಕಿರುವ ವಿಚಾರ ತಿಳಿದ ನಂತರ ಊರಿನ ಆಶಾ ಕಾರ್ಯಕರ್ತೆ ಸೋಮವಾರದಂದು ಅವರು ಮನೆಗೆ ತೆರಳಿದ್ದಾರೆ. ದಂಪತಿಯ ಸ್ಥಿತಿ ಹೀನಾಯವಾಗಿರುವುದನ್ನು ಕಂಡು ಗ್ರಾಮ ಪಂಚಾಯಿತಿಗೆ ವಿಷಯ ಮುಟ್ಟಿಸಲಾಗಿದೆ. ನಂತರ ಊರಿನ ಹಿರಿಯರ ಸಮ್ಮುಖದಲ್ಲಿ ವೃದ್ಧ ದಂಪತಿಯ ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಪೌಷ್ಠಿಕತೆಯ ಹಿನ್ನೆಲೆಯಲ್ಲಿ ಪೊಡಿಯನ್ ಮೃತನಾಗಿದ್ದಾನೆ. ಅಮ್ಮಿನಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಂಪತಿಯ ಮನೆಯ ಕೊಠಡಿಯನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಹಲವಾರು ದಿನಗಳಷ್ಟು ಹಳೆಯದಾದ ಆಹಾರವನ್ನು ಸಿಕ್ಕಿದೆ. ವೃದ್ಧ ದಂಪತಿಗಳಿಗೆ ಆಹಾರ ಮತ್ತು ಚಿಕಿತ್ಸೆ ನೀಡದ ಕಾರಣ ಅಸ್ವಾಭಾವಿಕ ಸಾವಿನ ಪ್ರಕರಣ ಪೊಲೀಸರು ದಾಖಲಿಸಿಕೊಂಡಿದ್ದಾರೆ. ರೆಜಿ ಮತ್ತು ಜಾನ್ಸಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮರಣೋತ್ತರ ವರದಿ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಡಿಯನ್ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಬುಧವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net