ಕೃಷ್ಣಾ ನದಿ ನೀರಲ್ಲಿ ಮುಳುಗಿ ಗುರೂಜಿ ಮತ್ತು 5 ವಿದ್ಯಾರ್ಥಿಗಳು ಸಾವು! ಓರ್ವ ವಿದ್ಯಾರ್ಥಿ ಸಾವನ್ನೇ ಜಯಿಸಿ ಬಂದ

WhatsApp Image 2021-12-11 at 1.00.37 PM
Published on

ಗುಂಟೂರು(ಆಂಧ್ರಪ್ರದೇಶ): ಸ್ನಾನಕ್ಕೆಂದು ಗುರೂಜಿ ಜತೆ ಕೃಷ್ಣಾನದಿ ನೀರಿಗೆ ಇಳಿದ 7 ವಿದ್ಯಾರ್ಥಿಗಳ ಪೈಕಿ ಐವರು ಜಲಸಮಾಧಿಯಾಗಿದ್ದು, ಮಕ್ಕಳ ಜತೆಗೆ ಗುರೂಜಿಯೂ ದುರಂತ ಅಂತ್ಯಕಂಡ ಘಟನೆ ಗುಂಟೂರು ಜಿಲ್ಲೆಯ ಅಚ್ಚಂಪೇಟ ಮಂಡಲದ ಮಡಿಪಾಡು ಸಮೀಪ ಕೃಷ್ಣಾ ನದಿಯಲ್ಲಿ ಸಂಭವಿಸಿದೆ.

ಮಡಿಪಾಡು ಗ್ರಾಮದ ಶ್ವೇತಾ ಶೃಂಗಾಚಲಂ ವೇದಾಂತ ಗುರುಕುಲ ವೇದ ಶಾಲೆಯ ಗುರೂಜಿ(ಶಿಕ್ಷಕ) ಕೆ. ಸುಬ್ರಹ್ಮಣ್ಯಂ(24), ವಿದ್ಯಾರ್ಥಿಗಳಾದ ಮಧ್ಯಪ್ರದೇಶದ ಶಿವಶರ್ಮ(14), ಉತ್ತರ ಪ್ರದೇಶ ಮೂಲದ ಹರ್ಷಿತ್ ಶುಕ್ಲಾ(15), ಶುಭಂ ತ್ರಿವೇದಿ(17), ಅಂಶುಮಾನ್ ಶುಕ್ಲಾ, ಶಿವ ಶರ್ಮಾ(14) ಮತ್ತು ನಿತೀಶ್ ಕುಮಾರ್(15) ಮೃತರು. ಶಿಕ್ಷಕ ಸುಬ್ರಹ್ಮಣ್ಯಂ ಗುಂಟೂರು ಜಿಲ್ಲೆ ನರಸರಾವ್ ಪೇಟೆಯವರು.

ಶಿಕ್ಷಕ ಸುಬ್ರಹ್ಮಣ್ಯಂ ಅವರು ಶುಕ್ರವಾರ ಸಂಜೆ ಶಾಲೆ ಮುಗಿದ ಬಳಿಕ 8 ವಿದ್ಯಾರ್ಥಿಗಳೊಂದಿಗೆ ನದಿತೀರಕ್ಕೆ ಬಂದಿದ್ದರು. ಈ ಪಕಿ ಶಿಕ್ಷಕ ಮತ್ತು 6 ವಿದ್ಯಾರ್ಥಿಗಳು ಸ್ನಾನಕ್ಕೆಂದು ನದಿಗೆ ಇಳಿದಿದ್ದು, ಆಳ ಜಾಗಕ್ಕೆ ಹೋಗಿದ್ದಾರೆ. ಈ ಪೈಕಿ 6 ಮಂದಿ ಈಜು ಬಾರದೆ ನೀರಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ. ಈಜು ಬಲ್ಲ ಓರ್ವ ವಿದ್ಯಾರ್ಥಿ ಬದುಕುಳಿದಿದ್ದು, ನದಿ ದಡದಲ್ಲೇ ಕುಳಿತಿದ್ದ ಉಳಿದ ಇಬ್ಬರು ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಈಜುಗಾರರ ತಂಡವು ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರಕ್ಕೆ ತೆಗೆದು ಆಯಾ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net