ನಾಯಿಮರಿಗಳನ್ನು ತಿನ್ನಲು ಬಂದ ಕೊಳಕುಮಂಡಲ ಹಾವನ್ನೇ ಕಚ್ಚಿ ಪ್ರಾಣಬಿಟ್ಟ ತಾಯಿ! ತುಮಕೂರಲ್ಲಿ ಮನಕಲಕುವ ಘಟನೆ

dog
Published on

ತುಮಕೂರು: ತನ್ನ ಮರಿಗಳನ್ನು ತಿನ್ನಲು ಬಂದ ಕೊಳಕುಮಂಡಲ ಹಾವಿನ ವಿರುದ್ಧ ಹೋರಾಡಿ ತಾಯಿ ನಾಯಿ ಪ್ರಾಣಬಿಟ್ಟ ಅಮಾನವೀಯ ಘಟನೆ ನಗರದ ಅಗ್ರಹಾರದ ಬಳಿ ಇತ್ತೀಚಿಗೆ ನಡೆದಿದೆ.

ಹುಲ್ಲಿನ ಬಣವೆಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದ ನಾಯಿಯ ಸಮೀಪದಲ್ಲಿಯೇ ಕೊಳಕು ಮಂಡಲ ಹಾವು ಇತ್ತು. ನಾಯಿ ಮರಿಗಳನ್ನು ತಿನ್ನಲು ಹಾವು ಬಂದಿದ್ದನ್ನು ಗಮನಿಸಿದ್ದ ನಾಯಿ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಸ್ಥಳದಲ್ಲಿಯೇ ಕುಳಿತು ಹಾವನ್ನು ಹಿಮ್ಮೆಟ್ಟಿಸಲು ಸತತ ಪ್ರಯತ್ನ ನಡೆಸುತ್ತಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಉರಗ ತಜ್ಞರನ್ನು ಸಂಪರ್ಕಿಸಿ ಹಾವು ಹಿಡಿಯಲು ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಬಂದ ವಾರಂಗಲ್​ ವನ್ಯಜೀವಿ ಸಂಸ್ಥೆಯ ದಿಲೀಪ್​ ಮತ್ತು ತಂಡ ಹಾವು ರಕ್ಷಿಸಿ, ಹಿಡಿಯುವಾಗ ಸ್ಥಳದಲ್ಲಿಯೇ ಕಾದುಕುಳಿತಿದ್ದ ನಾಯಿಯೇ ಹಾವನ್ನು ಕಚ್ಚಿತು. ಹಾವು ಕೂಡ ತಕ್ಷಣ ತಪ್ಪಿಸಿಕೊಂಡು ಹುಲ್ಲಿನ ಬಳಿ ಅವಿತುಕೊಂಡಿತು. ಸುಮಾರು ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಆದರೆ ಮರಿಗಳನ್ನು ರಕ್ಷಿಸಿಕೊಳ್ಳಲು ಹೋಗಿ ಕೊಳಕು ಮಂಡಲ ಹಾವನ್ನೇ ಕಚ್ಚಿದ್ದ ನಾಯಿ ಪ್ರಾಣ ಬಿಟ್ಟಿದೆ.

ಹುಲ್ಲಿನ ಬಣವೆಯ ಬಳಿ ನಾಯಿ ಮರಿಗಳನ್ನು ತಿನ್ನಲು ಹೊಂಚು ಹಾಕಿದ್ದ ಕೊಳಕು ಮಂಡಲ ಹಾವು ಹಿಡಿಯುವ ಸಂದರ್ಭದಲ್ಲಿ ಹಾವಿಗೆ ಕಚ್ಚಿದ ತಾಯಿ ನಾಯಿ ಮೃತಪಟ್ಟಿದೆ. ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ ಎಂದು ವಾರಂಗಲ್​ ವನ್ಯಜಿವಿ ಜಾಗೃತಿ ಸಂಸ್ಥೆಯ ದಿಲೀಪ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net