More

  ರೈಲು ಅಪಘಾತದ ಕಲ್ಪಿತ ಕಾರ್ಯಾಚರಣೆ

  ಸಕಲೇಶಪುರ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರೈಲ್ವೆ ಸಿಬ್ಬಂದಿ ಶನಿವಾರ ರೈಲು ಅಪಘಾತದ ಕಲ್ಪಿತ ಕಾರ್ಯಾಚರಣೆ ಆಯೋಜಿಸಿದ್ದರು.


  ಶುಕ್ರವಾರವೇ ಕ್ರೇನ್ ಬಳಸಿ ಒಂದು ಬೋಗಿಯನ್ನು ಮಗುಚಿ ಹಾಕಿದ್ದರೆ, ಮತ್ತೊಂದು ಬೋಗಿಯನ್ನು ಹಳಿಯಿಂದ ಬೇರ್ಪಡಿಸಲಾಗಿತ್ತು. ಶನಿವಾರ ಬೆಳಗ್ಗೆ ಇನ್ನೂರಕ್ಕೂ ಅಧಿಕ ಸಿಬ್ಬಂದಿ ಕಲ್ಪಿತ ಕಾರ್ಯಾಚರಣೆಗೆ ಇಳಿದಿದ್ದು, ರೈಲು ಅಪಘಾತದ ವೇಳೆ ನಡೆಸುವ ಮುಂಜಾಗ್ರತಾ ಕ್ರಮವಾಗಿ ಮೊದಲಿಗೆ ಜಿಲ್ಲಾಧಿಕಾರಿಗೆ ರೈಲು ಅಪಘಾತವಾಗಿರುವ ಮಾಹಿತಿ ನೀಡಿದ ಸಿಬ್ಬಂದಿ, ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ, ರೈಲ್ವೆ ನಿಲ್ದಾಣದಲ್ಲಿ ಸೈರನ್ ಮೊಳಗಿಸುವ ಮೂಲಕ ಕಾರ್ಯಾಚರಣೆಗೆ ಇಳಿಸಲಾಯಿತು.


  ಮೊದಲಿಗೆ ರೈಲು ಬೋಗಿ, ಕಿಟಕಿ ಹಾಗೂ ಛಾವಣಿಯನ್ನು ತುಂಡರಿಸಿ ಒಳಗಿದ್ದ ಸಿಬ್ಬಂದಿಯನ್ನು ಸ್ಟ್ರೆಕ್ಚರ್ ಮೂಲಕ ಹೊರತಂದು ಸ್ಥಳದಲ್ಲೇ ನಿರ್ಮಾಣ ಮಾಡಿದ್ದ ಟೆಂಟ್‌ನಲ್ಲಿ ತುರ್ತು ಚಿಕಿತ್ಸೆ ನೀಡಲಾಯಿತು.


  ಪ್ರಯಾಣಿಕರ ರಕ್ಷಣೆಯ ನಂತರ ಕ್ರೇನ್ ಹಾಗೂ ಇತರ ಯಂತ್ರಗಳನ್ನು ಬಳಸಿ ನೆಲಕ್ಕುರುಳಿದ ಬೋಗಿಗಳನ್ನು ಮೇಲೆತ್ತುವ ಮೂಲಕ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಯಿತು.


  ದಿಕ್ಕು ತಪ್ಪಿದ ಜಿಲ್ಲಾಧಿಕಾರಿ: ಶನಿವಾರ ನಡೆಯಲಿರುವ ಕಲ್ಪಿತ ಕಾರ್ಯಾಚರಣೆ ವಿಚಾರವನ್ನು ರೈಲ್ವೆ ಇಲಾಖೆ ಜಿಲ್ಲಾಧಿಕಾರಿಗೆ ಮುಂಚಿತವಾಗಿಯೇ ತಿಳಿಸಿದ್ದು, ಕಲ್ಪಿತ ಕಾರ್ಯಾಚರಣೆಯ ನೋಡಲ್ ಅಧಿಕಾರಿಯನ್ನಾಗಿ ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶ್ರುತಿ ಅವರನ್ನು ಜಿಲ್ಲಾಧಿಕಾರಿಯೇ ನೇಮಿಸಿದ್ದರು. ಶನಿವಾರ ಕಾರ್ಯಾಚರಣೆಗೂ ಮೊದಲು ನಿಯಮದಂತೆ ರೈಲ್ವೆ ಅಧಿಕಾರಿ, ಜಿಲ್ಲಾಧಿಕಾರಿಗೆ ಕರೆಮಾಡಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಗ್ರಾಮ ಸಮೀಪ ರೈಲು ಅಪಘಾತವಾಗಿ ಎರಡು ಬೋಗಿಗಳು ನೆಲಕ್ಕುರುಳಿದ್ದು, 10 ಜನರು ಮೃತಪಟ್ಟಿದ್ದಾರೆಂಬ ಮಾಹಿತಿ ನೀಡಿದ್ದರು.
  ಆದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡಾಯಿಸುವಂತೆ ಸಕಲೇಶಪುರ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಡಿವೈಎಸ್‌ಪಿಗೆ ಸೂಚನೆ ನೀಡಿದ್ದು, ಜಿಲ್ಲೆಯಿಂದ ಹೆಚ್ಚಿನ ಆಂಬುಲೆನ್ಸ್‌ಗಳು ತೆರಳುವಂತೆ ನಿರ್ದೇಶನ ನೀಡಿದ್ದರು.


  ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಸ್ಥಳಕ್ಕೆ ತರಾತುರಿಯಲ್ಲಿ ಆಗಮಿಸಿದ ತಾಲೂಕಿನ ಹಿರಿಯ ಮೂವರು ಅಧಿಕಾರಿಗಳು ಇದು ಕಲ್ಪಿತ ಕಾರ್ಯಾಚರಣೆ ಎಂಬುದನ್ನು ಖಾತ್ರಿಪಡಿಸಿಕೊಂಡರೆ, ಹಾಸನದಿಂದ ಹೊರಟ್ಟಿದ್ದ ಸಾಕಷ್ಟು ಆಂಬುಲೆನ್ಸ್‌ಗಳು ವಿಚಾರ ತಿಳಿದು ಅರ್ಧದಾರಿಯಿಂದ ವಾಪಸ್ಸಾದವು. ಆದರೆ, ಇದ್ಯಾವುದರ ಪರಿವೇ ಇಲ್ಲದಂತೆ ದೌಡಾಯಿಸಿ ಬಂದ ಜಿಲ್ಲಾಧಿಕಾರಿ, ತಮ್ಮ ಸಹೋದ್ಯೋಗಿಗಳ ಬಳಿ ಎರಡು ದಿನಗಳ ಹಿಂದೆ ನಾಲ್ಕು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದು, ವಾರ ತುಂಬುವ ಮೊದಲೇ ಇಂತಹ ದುರ್ಘಟನೆ ಮತ್ತೆ ಸಂಭವಿಸಿತ್ತಲ್ಲ ಎನ್ನುವ ಮೂಲಕ ಪಟ್ಟಣಕ್ಕೆ ಬಂದರು. ಕಲ್ಪಿತ ಕಾರ್ಯಾಚರಣೆ ಎಂಬುದನ್ನು ಅರಿಯದೆ ನಗೆಪಾಟಲಿಗೆ ಗುರಿಯಾದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts