ಬೆತ್ತದಿಂದ ಥಳಿಸಿ ಮಹಿಳೆಯನ್ನ ಕೊಂದ ಪೂಜಾರಿ! ಚನ್ನರಾಯಪಟ್ಟಣದಲ್ಲಿ ನಡೆಯಿತು ಘೋರ ಕೃತ್ಯ

New Project
Published on

ಹಾಸನ: ಮಹಿಳೆಯೊಬ್ಬರಗೆ ಪೂಜಾರಿಯೊಬ್ಬ ಬೆತ್ತದಿಂದ ಥಳಿಸಿ ಕೊನೆಗೆ ಆಕೆಯ ಸಾವಿಗೂ ಕಾರಣನಾದ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಂಭವಿಸಿದೆ.

ಹಿರೀಸಾವೆ ಹೋಬಳಿಯ ಗೌಡರಹಳ್ಳಿ ಗ್ರಾಮದ ಪಾರ್ವತಿ(37) ಮೃತ ಮಹಿಳೆ. ಎರಡು ವರ್ಷಗಳಿಂದ ಬೆಂಗಳೂರಿನ ಸುಂಕದಕಟ್ಟೆಯಲ್ಲಿರುವ ಮಗಳ ಮನೆಯಲ್ಲಿ ವಾಸವಿದ್ದ ಪಾರ್ವತಿ ಅವರಿಗೆ ಎರಡು ತಿಂಗಳಿಂದ ತಲೆನೋವು ಬಾಧಿಸುತ್ತಿತ್ತು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಈ ಬಗ್ಗೆ ಬೆಕ್ಕ ಗ್ರಾಮದಲ್ಲಿರುವ ಸಹೋದರಿ ಮಂಜುಳಾ ಅವರ ಬಳಿ ಪಾರ್ವತಿ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.

ಅಕ್ಕನಿಗೆ ಕಾಡುತ್ತಿರುವ ತಲೆನೋವಿನ ಬಗ್ಗೆ ಡಿ.2ರಂದು ಗ್ರಾಮದ ಪಿರಿಯಪಟ್ಟಲದಮ್ಮ ದೇವಾಲಯದ ಪೂಜಾರಿ ಮನುಗೆ ತಿಳಿಸಿದರು. ಡಿ.3 ರಂದು ದೇವಾಲಯಕ್ಕೆ ತೆರಳಿದ್ದಾಗ ಪೂಜೆ ಮಾಡಿ ಪ್ರಸಾದ ನೀಡಿದ್ದ ಪೂಜಾರಿ, ನಿಮ್ಮ ಅಕ್ಕನ ದೇಹದಲ್ಲಿ ದುಷ್ಟಶಕ್ತಿ ಇದೆ. ಅದನ್ನು ತೊಲಗಿಸುವೆ. ಡಿ.7 ರಂದು ನಡೆಯುವ ಉತ್ಸವದಲ್ಲಿ ವಿಶೇಷ ಪೂಜೆ ನಡೆಸಿ ಪರಿಹರಿಸುವುದಾಗಿ ಭರವಸೆ ನೀಡಿದ್ದ.

ಅದರಂತೆ ದೇಗುಲಕ್ಕೆ ಬಂದ ಪಾರ್ವತಿಗೆ ದುಷ್ಟಶಕ್ತಿಯನ್ನು ಬೆದರಿಸುತ್ತೇನೆ ಎಂದು ಹೇಳಿ ಆಕೆಯ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಬೆತ್ತದಿಂದ ಥಳಿಸಿದ್ದ. ಏಟಿನ ನೋವು ಸಹಿಸಲಾಗದೆ ಅಸ್ವಸ್ಥರಾಗಿ ನೆಲಕ್ಕುರುಳಿದ ಪಾರ್ವತಿ ಅವರಿಗೆ ಭೂತ ಬಿಟ್ಟು ಹೋಗಿದೆ ಎಂದು ಪೂಜಾರಿ ಹೇಳಿ ನಿಂಬೆಹಣ್ಣಿನ ರಸ ಕುಡಿಸಿ ಮನೆಗೆ ಕಳುಹಿಸಿದ್ದ. ಎಷ್ಟು ಹೊತ್ತಾದರೂ ಪಾರ್ವತಿ ಚೇತರಿಸಿಕೊಳ್ಳದಿದ್ದಾಗ ಆಕೆಯ ಸಹೋದರಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಡಿ.8 ರಂದು ಹಾಸನದ ಹಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮುಂಜಾನೆ ಪಾರ್ವತಿ ಮೃತಪಟ್ಟರು.

ಪೂಜಾರಿ ಮನು ನನ್ನ ತಾಯಿಗೆ ಬೆತ್ತದ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಪಾರ್ವತಿ ಅವರ ಮಗಳು ಚೈತ್ರಾ ನೀಡಿದ ದೂರಿನನ್ವಯ ಶ್ರವಣಬೆಳಗೊಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೂಜಾರಿ ಮನು (42) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net