ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು! ಮಗಳು ಸತ್ತ ನೋವಿನಲ್ಲಿದ್ದ ಪಾಲಕರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

mysore love story (2)
Published on

ಮೈಸೂರು: ಭಗ್ನ ಪ್ರೇಮಿಗಳಿಬ್ಬರೂ ವೇಲ್​ನಿಂದ ಪರಸ್ಪರ ಕಾಲುಗಳನ್ನು ಕಟ್ಟಿಕೊಂಡು ಜತೆಯಾಗೇ ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕನ್ನಂಬಾಡಿ ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಹಿನ್ನೀರು ಪ್ರದೇಶದಲ್ಲಿ ಸಂಭವಸಿದೆ.

ಮೈಸೂರಿನ ಮೇಟಗಳ್ಳಿಯ ನವೀನ್(20) ಮತ್ತು ನಿಸರ್ಗ(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರಿಬ್ಬರೂ ಪರಸ್ಪರ ಸಂಬಂಧಿಗಳಾಗಿದ್ದು, ಹಲವು ವರ್ಷದಿಂದ ಪ್ರೀತಿಸುತ್ತಿದ್ದರು.

ಆದರೆ, ಯುವತಿಯ ಕುಟುಂಬಸ್ಥರು ಕಳೆದ ತಿಂಗಳು ಅಂದ್ರೆ ನವೆಂಬರ್ 20ರಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಪುರದ ಕಾಂತರಾಜ್ ಎಂಬಾತನ ಜತೆ ನಿಸರ್ಗಳ ಮದುವೆ ಮಾಡಿದ್ದರು. ಅತ್ತ ಪ್ರೇಯಸಿಯನ್ನು ಬಿಟ್ಟು ಬದುಕುವ ಶಕ್ತಿ ಇಲ್ಲದೆ, ಅತ್ತ ಬೇರೊಬ್ಬನೊಂದಿಗೆ ಸಂಸಾರ ನಡೆಸಲು ಆಗದೆ ನೋವಿನಲ್ಲಿ ನರಳಾಡುತ್ತಿದ್ದ ಪ್ರೇಮಿಗಳಿಬ್ಬರೂ ಸಾವಿನಲ್ಲಿ ಒಂದಾಗಲು ನಿರ್ಧರಿಸಿದ್ದಾರೆ. ಅದರಂತೆ ಯುವತಿಯ ವೇಲ್​ನಿಂದಲೇ ಇಬ್ಬರೂ ತಮ್ಮ ಕಾಲುಗಳನ್ನು ಕಟ್ಟಿಕೊಂಡು ಜತೆಯಾಗಿಯೇ ಕೆಆರ್​ಎಸ್​ನ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅತ್ತ ನಿಸರ್ಗಳ ಗಂಡನ ಮನೆಯವರು ಮೃತಳ ಕುಟುಂಬಸ್ಥರ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಮಗಳನ್ನು ಕಳೆದುಕೊಂಡ ನೋವಿನಲ್ಲಿರುವ ಪಾಲಕರಿಗೆ, ಬೀಗರ ಮನೆಯವರು ಕೊಟ್ಟ ದೂರು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ನಿಸರ್ಗ ಮತ್ತು ನವೀನ್​ ಇಬ್ಬರೂ ಪ್ರೀತಿಸುತ್ತಿದ್ದ ವಿಷಯ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ಯುವತಿ ಕುಟುಂಬಸ್ಥರು ಮಧ್ಯವರ್ತಿಗಳ ಮೂಲಕ ಕಾಂತರಾಜ್​ ಜತೆ ಮದುವೆ ನಿಶ್ಚಯ ಮಾಡಿದ್ದರು. ನಾವೇ ಹಣ ಖರ್ಚು ಮಾಡಿಕೊಂಡು ಮದುವೆ ಮಾಡಿಕೊಂಡಿದ್ದೆವು. ಅವರಿಬ್ಬರ ಪ್ರೀತಿ‌ ವಿಷ್ಯ ಮುಚ್ಚಿಟ್ಟು ನಮ್ಮ ಹುಡುಗನಿಗೆ‌‌ ಮೋಸ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತ ಕಾಂತರಾಜ್ ಪೋಷಕರು ಪಟ್ಟುಹಿಡಿದಿದ್ದಾರೆ.

ನಿಸರ್ಗ ಹಾಗೂ ನವೀನ್ ಅವರದ್ದು 20ರ ಹರೆಯ. ವಯಸ್ಸು, ಜಾತಿ, ಅಂತಸ್ತು ಯಾವುದೂ ಪ್ರೀತಿಗೆ ಅಡ್ಡಿ ಆಗಿರಲಿಲ್ಲ. ಆದ್ರೆ ಯುವತಿ ಪೋಷಕರು ಮಾಡಿದ ಪ್ರೀತಿಗೆ ವಿರೋಧ ಮಾಡಿ ಏನೋ ಸಾಧಿಸಿದಂತೆ ಬೀಗಿದ್ದರು. ಈಗ ಅವರಿಬ್ಬರೂ ಬದುಕಿಲ್ಲ. ಮದುವೆಯಾದ ಕಾಂತರಾಜ್ ಜೀವನವೂ ಹಾಳಾಯ್ತು. (ದಿಗ್ವಿಜಯ ನ್ಯೂಸ್, ಮೈಸೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net