

ಎನ್.ಎಲ್. ಶಿವಮಾದು ಬೆಂಗಳೂರು
ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಫಲಿತಾಂಶ ಹೆಚ್ಚಳಕ್ಕಾಗಿ ಬದಲಾಯಿಸಿದ ನಿಯಮಗಳು ಫಲಪ್ರದವಾಗಿದೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಕಟ್ಟುನಿಟ್ಟಿನ ಪರೀಕ್ಷಾ ನಿಯಮಗಳನ್ನು ಅಳವಡಿಸಿಕೊಂಡಿರುವ ಪರಿಣಾಮ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಫಲಿತಾಂಶ ಕಡಿಮೆಯಾಗುತ್ತಿತ್ತು. ಆದರೆ, ದಕ್ಷಿಣ ಭಾರತ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಪರೀಕ್ಷಾ ನಿಯಮಗಳಲ್ಲಿ ಸಡಿಲಿಕೆ ಇದೆ. ಆದರೂ ಕರ್ನಾಟಕಕ್ಕಿಂತ ಇತರ ರಾಜ್ಯಗಳಲ್ಲಿ ಹೆಚ್ಚಿನ ಫಲಿತಾಂಶ ಪ್ರಕಟವಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣವಿಲ್ಲವೆಂಬ ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ, ರಾಜ್ಯದಲ್ಲಿಯೂ ಫಲಿತಾಂಶ ಹೆಚ್ಚಳ ಉದ್ದೇಶದಿಂದ ಶಿಕ್ಷಣ ಇಲಾಖೆಯು ವರ್ಷಾರಂಭದಲ್ಲಿ ಕೈಗೊಂಡಿದ್ದ ಪ್ರಯತ್ನಗಳಿಗೆ ಫಲ ಸಿಕ್ಕಿದೆ. ಅಲ್ಲದೆ, ದ್ವಿತೀಯ ಪಿಯುಸಿ ವಿದ್ಯಾರ್ಹತೆ ಮೇಲೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆ ಭರ್ತಿಯಲ್ಲಿಯೂ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಥಾನಮಾನ ದೊರೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಇದರ ಜತೆಗೆ ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಬೇಕು. ಯಾವುದೇ ಒತ್ತಡಕ್ಕೆ ಸಿಲುಕದೆ ವಿದ್ಯಾರ್ಥಿಗಳು ಆರಾಮವಾಗಿ ಪರೀಕ್ಷೆ ಎದುರಿಸಬೇಕೆಂಬ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿಗೊಳಿಸಿತ್ತು.
ಪ್ರಮುಖವಾಗಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ 20 ಅಂಕಗಳ ಆಂತರಿಕ ಮೌಲ್ಯಮಾಪನ ಹಾಗೂ ಕರೊನಾ ಸಮಯದಲ್ಲಿ ಜಾರಿಗೊಳಿಸಿದ್ದ ಬಹು ಆಯ್ಕೆ ಮಾದರಿ (ಎಂಸಿಕ್ಯು) ಪ್ರಶ್ನೆಪತ್ರಿಕೆಯನ್ನು ಅನುಷ್ಠಾನ ಮಾಡಲಾಗಿತ್ತು. 80 ಅಂಕಗಳ ಲಿಖಿತ ಪರೀಕ್ಷೆಯನ್ನು 20 ಅಂಕಗಳಿಗೆ ಹೊಂದಿಸಿ ಬರೆಯಿರಿ, ಬಿಟ್ಟ ಸ್ಥಳ ತುಂಬಿ, ಒಂದು ಅಂಕದ ಪ್ರಶ್ನೆಗಳು ಮತ್ತು ಒಂದ ವಾಕ್ಯದ ಪ್ರಶ್ನೆಗಳನ್ನು ನೀಡಲಾಗಿತ್ತು. ಅಂದರೆ, 20 ಆಂತರಿಕ ಅಂಕ ಮತ್ತು 20 ಎಂಸಿಕ್ಯು ಎರಡನ್ನು ಓದಿಕೊಂಡರೆ ಭಾಗಶಃ ವಿದ್ಯಾರ್ಥಿಗಳು ತೇರ್ಗಡೆಯಾಗಬಹುದು. ಈ ನಿಯಮವನ್ನು ಜಾರಿಗೊಳಿಸುವ ಮುನ್ನ ಶಿಕ್ಷಣ ಇಲಾಖೆಯು ವಿವಿಧ ರಾಜ್ಯಗಳ ಪರೀಕ್ಷಾ ಮಾದರಿ ಅಧ್ಯಯನ ನಡೆಸಿ ಹೊಸ ನಿಯಮ ಜಾರಿಗೊಳಿಸಿತ್ತು. ಈ ಎಲ್ಲ ಅಂಶಗಳಿಂದ ದಾಖಲೆಯ ಶೇ.81.15 ಅಂಕ ಗಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಶಿಕ್ಷಣ ಕ್ಷೇತ್ರದ ಪರಿಣತರು.
ಏ.29ರಿಂದ ಮೇ 16ರವರೆಗೆ ಪರೀಕ್ಷೆ-2: ಮಂಡಳಿಯು ವರ್ಷಕ್ಕೆ ಮೂರು ಪರೀಕ್ಷೆ ನಡೆಸಲಿದ್ದು, ಎರಡನೇ ಪರೀಕ್ಷೆಯನ್ನು ಏ.29ರಿಂದ ಮೇ 16ರವರೆಗೆ ನಡೆಸಲಿದೆ. ಮೊದಲ ಪರೀಕ್ಷೆಯಲ್ಲಿ ಫೇಲ್ ಆದ ಹಾಗೂ ಅಂಕಗಳಲ್ಲಿ ಸಮಾಧಾನ ಇಲ್ಲದ ವಿದ್ಯಾರ್ಥಿಗಳು ಮುಂಬರುವ ಇತರ ಎರಡು ಪರೀಕ್ಷೆ ಬರೆಯಬಹುದು.
ಉತ್ತರ ಪತ್ರಿಕೆಯ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏ.16ರವರೆಗೆ ಅವಕಾಶ ನೀಡಲಾಗಿದೆ. ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಏ.14ರಿಂದ 19ರವರೆಗೆ ಅವಕಾಶ ಕಲ್ಪಿಸಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏ.14ರಿಂದ 20ರವರೆಗೆ ಅವಕಾಶ ನೀಡಿದೆ. ಸ್ಕಾ ್ಯ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಹಾಗೂ ಮರು ಮೌಲ್ಯಮಾಪನದ ಶುಲ್ಕ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 1,670 ರೂ. ನಿಗದಿಪಡಿಸಿದೆ. ಮರು ಮೌಲ್ಯಮಾಪನದ ಮತ್ತು ಮರು ಎಣಿಕೆ ಫಲಿತಾಂಶವನ್ನು ಮಂಡಳಿ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ. ಪರೀಕ್ಷೆ-2 ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ ದಂಡರಹಿತ ಏ.16, ದಂಡಸಹಿತ ಏ.17, 18 ಆಗಿದೆ. ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳು ಏ.10ರಿಂದ 16ರೊಳಗೆ ತಮ್ಮ ಕಾಲೇಜು ಅಥವಾ ಮಂಡಳಿಯ ವೆಬ್ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಗೊಂದಲ ಎದುರಾದಲ್ಲಿ ಮಂಡಳಿಯ ಸಹಾಯವಾಣಿ 080-23310075 ಅಥವಾ 76 ಸಂರ್ಪಸಿ.
ಮತ್ತಷ್ಟು ಹೆಚ್ಚಳ ಸಾಧ್ಯತೆ: ಈ ಹಿಂದೆ ವಿದ್ಯಾರ್ಥಿಗಳು ಮರು ಮೌಲ್ಯಮಾಪನದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಗಳಿಸಿದ ಅತಿ ಹೆಚ್ಚಿನ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮರು ಮೌಲ್ಯಮಾಪನ, ಅಂಕಗಳ ಮರು ಎಣಿಕೆ, ಪರೀಕ್ಷೆ-2 ಮತ್ತು ಪರೀಕ್ಷೆ-3ರಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಸಾಧ್ಯತೆಗಳಿರುವ ಕಾರಣ ಫಲಿತಾಂಶ ಮತ್ತಷ್ಟು ಹೆಚ್ಚಳವಾಗುವುದು ಖಾತ್ರಿಯಾಗಿದೆ.
ವಿದ್ಯಾಲಕ್ಷ್ಮೀಗೆ ವೈದ್ಯಳಾಗುವ ಕನಸು: ಚೌಗಲಾ ಶಿಕ್ಷಣ ಸಂಸ್ಥೆಯ ಭೈರಿದೇವರಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜ್ ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮೀ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600 ಅಂಕಗಳಿಗೆ 598 ಅಂಕ ಪಡೆದಿರುವ ವಿದ್ಯಾಲಕ್ಷ್ಮೀ, ಹಿಂದಿ ಭಾಷೆಯಲ್ಲಿ 98 ಅಂಕ ಗಳಿಸಿದ್ದಾರೆ. ಉಳಿದೆಲ್ಲ ವಿಷಯದಲ್ಲಿ ಶೇ. ನೂರು ಅಂಕ ಗಿಟ್ಟಿಸಿದ್ದಾರೆ. ವಿದ್ಯಾಲಕ್ಷ್ಮೀ ತಂದೆ ಎಸ್. ಅಖಿಲೇಶ್ವರನ್ ರೈಲ್ವೆ ವಿಭಾಗದಲ್ಲಿ ಹಿರಿಯ ಸೆಕ್ಷನ್ ಇಂಜಿನಿಯರ್ ಆಗಿದ್ದಾರೆ. ತಾಯಿ ಎ. ಕೃತಿಕಾ ಗೃಹಿಣಿ. ಮೂಲತಃ ತಮಿಳುನಾಡಿನವರಾದ ಇವರು 2002ರಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.
ಕ್ಷೌರಿಕನ ಪುತ್ರನ ಅನುಪಮ ಸಾಧನೆ: ಬಿಎಲ್ಡಿಇ ಸಂಸ್ಥೆಯ ಎಸ್ಎಸ್ ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಾದರಿಯಾಗಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ವೇದಾಂತ ಜ್ಞಾನೋಬಾ ನಾವಿ ಶೇ. 99.33 ರಷ್ಟು ಅಂಕ ಪಡೆದು ಸಾಧನೆ ಮೆರೆದಿದ್ದಾನೆ. ಕನ್ನಡ-99, ಹಿಂದಿ-97, ಇತಿಹಾಸ-100, ಅರ್ಥಶಾಸ್ತ್ರ-100, ರಾಜಕೀಯ ವಿಜ್ಞಾನ-100 ಹಾಗೂ ಶಿಕ್ಷಣ ಶಾಸ್ತ್ರದಲ್ಲಿ -100 ಅಂಕ ಪಡೆದಿದ್ದಾರೆ. ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ ತಂದೆ ಕೋವಿಡ್ನಲ್ಲಿ ನಿಧನ ಹೊಂದಿದರು. ಸಹೋದರಿಯೊಬ್ಬರಿದ್ದು, ತಾಯಿ ಲಲಿತಾ ಕೂಲಿ ಮಾಡಿ ವೇದಾಂತನನ್ನು ಓದಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿದ್ದುಕೊಂಡು ಕಷ್ಟಪಟ್ಟು- ಇಷ್ಟಪಟ್ಟು ಓದಿದ ವೇದಾಂತ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಸಲು ತೆಗೆದಿದ್ದು, ಮುಂದೆ ಪದವಿ ಪ್ರವೇಶ ಪಡೆದು ಕೆಎಎಸ್ ಇಲ್ಲವೇ ಐಎಎಸ್ ಮಾಡುವ ಗುರಿ ಹೊಂದಿದ್ದಾರೆ.
ಕೃಷಿಕನ ಪುತ್ರಿ ಕವಿತಾ ಪ್ರಥಮ: ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಬಿ.ವಿ. 596 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕನ್ನಡ, ರಾಜ್ಯಶಾಸ್ತ್ರ ಹಾಗೂ ಶಿಕ್ಷಣ ವಿಷಯದಲ್ಲಿ ತಲಾ 100, ಇಂಗ್ಲಿಷ್, ಕನ್ನಡ ಐಚ್ಛಿಕ ತಲಾ 99, ಇತಿಹಾಸ ವಿಷಯದಲ್ಲಿ 98 ಅಂಕ ಗಳಿಸಿದ್ದಾರೆ. ಕೊಟ್ಟೂರಿನಿಂದ 20 ಕಿ.ಮೀ. ದೂರದಲ್ಲಿರುವ ಚೌಡಾಪುರದ ರೈತ ಬಿ.ವೀರಬಸಪ್ಪ, ವಿಶಾಲಮ್ಮ ದಂಪತಿಯ ಹಿರಿಯ ಪುತ್ರಿಯಾಗಿರುವ ಕವಿತಾ, ನಿತ್ಯ ಬಸ್ನಲ್ಲಿ ಕಾಲೇಜಿಗೆ ಬಂದು ಹೋಗುತ್ತಿದ್ದರು. ಕಾಲೇಜಿನಿಂದ ವಾಪಸಾದ ಬಳಿಕ ಮನೆ ಕೆಲಸ ಮುಗಿಸಿ ರಾತ್ರಿ 11 ಗಂಟೆವರೆಗೆ ಓದುತ್ತಿದ್ದರು. ಬಿಎ ಪದವಿ ಪಡೆದು ಕೆಎಎಸ್ ಅಧಿಕಾರಿಯಾಗುವ ಗುರಿ ಹೊಂದಿರುವ ಈಕೆಗೆ ಹೆಚ್ಚು ಅಂಕಗಳಿಸಲು ಈ ಹಿಂದೆ ಇಂದು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಾಗ ರಥದಲ್ಲಿ ಮೆರವಣಿಗೆ ನಡೆಸುತ್ತಿದ್ದದ್ದೇ ಪ್ರೇರಣೆಯಂತೆ.\
ವಾಣಿಜ್ಯ- ವಿಜ್ಞಾನ ವಿಭಾಗದಲ್ಲಿ ಟಾಪ್ -3 ಸಾಧನೆ: ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಕಾಲೇಜು ವಿದ್ಯಾರ್ಥಿನಿ ಬಿ.ತುಳಸಿ ಪೈ ಮತ್ತು ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಹರ್ಷಿತ್ ಎಸ್.ಎಚ್ ತಲಾ 596 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ಗುಣಸಾಗರ್, ಉಡುಪಿ ವಿದ್ಯೋದಯ ಪಿಯು ಕಾಲೇಜಿನ ವೈಭವಿ ಆಚಾರ್ಯ ತಲಾ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ಪೈಕಿ ಹರ್ಷಿತ್ ಮೂಲತಃ ತೀರ್ಥಹಳ್ಳಿಯವರಾಗಿದ್ದು, ಹಾಸ್ಟೆಲ್ನಲ್ಲಿ ವಾಸ್ತವ್ಯದಲ್ಲಿದ್ದು ಕಲಿಯುತ್ತಿದ್ದಾರೆ.
ಡಾಬಾ ಮಾಲೀಕನ ಪುತ್ರಿ ಟಾಪರ್: ನಗರದ ವಿದ್ಯಾನಿಧಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ.ಜ್ಞಾನವಿ 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕಾಲೇಜು ಹಾಸ್ಟೆಲ್ನಲ್ಲಿದ್ದುಕೊಂಡು ಓದುತ್ತಿದ್ದ ಜ್ಞಾನವಿ, ಕಾಲೇಜಿನಲ್ಲಿ ನಿರಂತರ ಟೆಸ್ಟ್, ಪ್ರಿಪರೇಟರಿ ಪರೀಕ್ಷೆಗಳಿಂದಾಗಿ ಹೆಚ್ಚಿನ ಅಂಕಗಳಿಸಲು, ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಸಾಧ್ಯವಾಯಿತು ಎನ್ನುತ್ತಾರೆ. ರಾಜ್ಯಕ್ಕೆ ಟಾಪರ್ ಬರುವ ನಿರೀಕ್ಷೆ ಇತ್ತು. ಸಿಎ ಫೌಂಡೇಷನ್ ಸೇರಿದ್ದೇನೆ. ಇದೇ ಸಂಸ್ಥೆಯಲ್ಲಿ ಬಿ.ಕಾಂ.,ಗೆ ಸೇರುತ್ತೇನೆ. ಸಿಎ ನನ್ನ ಕನಸು ಎನ್ನುತ್ತಾ ಖುಷಿ ಹಂಚಿಕೊಂಡರು. ಡಾಬಾ ನಡೆಸುವ ಮಂಜುನಾಥ್, ಮಂಜುಳಾ ದಂಪತಿ ಮೂವರು ಮಕ್ಕಳ ಶಿಕ್ಷಣಕ್ಕೆ ದುಡಿಮೆಯ ಎಲ್ಲ ಹಣವನ್ನು ವ್ಯಯಿಸುತ್ತಾ ಬಂದಿದ್ದಾರೆ. ನಮ್ಮ ಮಕ್ಕಳಂತೆ ಗ್ರಾಮೀಣಭಾಗದ ಪ್ರತಿಭಾನ್ವಿತ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಯಾವುದೇ ಸರ್ಕಾರಗಳಾಗಲಿ ಶಿಕ್ಷಣ, ಆರೋಗ್ಯವನ್ನು ಉಚಿತವಾಗಿ ನೀಡಬೇಕು ಎಂಬುದು ಜ್ಞಾನವಿ ತಂದೆ ಮಂಜುನಾಥ್ ಒತ್ತಾಸೆಯಾಗಿದೆ. ಜ್ಞಾನವಿ ಮೂಲತಃ ಮಂಡ್ಯ ಜಿಲ್ಲೆ ಬೀಚನಹಳ್ಳಿಯವರು.
ಒಳ್ಳೆಯ ಅಂಕ ಬರುತ್ತದೆ ಅಂದುಕೊಂಡಿದ್ದೆ. ರಾಜ್ಯಕ್ಕೆ ಪ್ರಥಮ ಸ್ಥಾನ ನಿರೀಕ್ಷಿಸಿರಲಿಲ್ಲ. ಕಾಲೇಜ್ ಸಮಯದಲ್ಲಿ ನಿತ್ಯ 8 ತಾಸು, ಉಳಿದ ದಿನಗಳಲ್ಲಿ 15 ತಾಸು ಅಧ್ಯಯನ ಮಾಡುತ್ತಿದ್ದೆ. ಮುಂದೆ ವೈದ್ಯಕೀಯ ಓದುವ ಆಸೆ ಇದೆ.
| ಎ. ವಿದ್ಯಾಲಕ್ಷ್ಮೀ ಪ್ರಥಮ ರ್ಯಾಂಕ್
ಕಾಲೇಜು ಆಡಳಿತ ಮಂಡಳಿ ಮತ್ತು ಪಾಲಕರಿಂದ ಉತ್ತಮ ಸಹಕಾರ ದೊರಕಿತು. ಸ್ವಂತ ಪರಿಶ್ರಮದಿಂದ ಅಧ್ಯಯನ ಮಾಡುತ್ತಿದ್ದೆ. ರಾತ್ರಿ ಹೆಚ್ಚು ಸಮಯ ಓದುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಎಲ್ಲ ಸಂದೇಹಗಳನ್ನು ಬಗೆಹರಿಸಿ ಸಹಕಾರ ನೀಡಿದರು. ಇದರಿಂದ ಹೆಚ್ಚು ಅಂಕ ಪಡೆಯಲು ಅನುಕೂಲವಾಯಿತು.
| ಎಂ.ಎಸ್. ಪವನ್ ಕುಮದ್ವತಿ ಪಿಯು ಕಾಲೇಜು, ಶಿಕಾರಿಪುರ
(ವಾಣಿಜ್ಯ-596 ಅಂಕ -ರಾಜ್ಯಕ್ಕೆ ದ್ವಿತೀಯ)
ಕಾಲೇಜಿನಲ್ಲಿ ಸಮರ್ಪಕವಾಗಿ ಪಾಠ ಕೇಳುವುದರೊಂದಿಗೆ ಮನೆಯಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಅಭ್ಯಾಸ ಮಾಡುತ್ತಿದ್ದೆ. ಉಪನ್ಯಾಸಕರ ಮಾರ್ಗದರ್ಶನದಿಂದಾಗಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿದೆ.
| ಕವಿತಾ ಬಿ.ವಿ.
ಕಲಾ ವಿಭಾಗದ ಟಾಪರ್, ಕೊಟ್ಟೂರು
ನಿತ್ಯ ಒಂದು ವಿಷಯವನ್ನು ತಲಾ ಎರಡು ಗಂಟೆಯಂತೆ ಅಭ್ಯಾಸ ಮಾಡುತ್ತಿದ್ದೆ. ಗಣಿತ, ಭೌತವಿಜ್ಞಾನ, ರಸಾಯನಶಾಸ್ತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೆ. ಉದ್ದದ ಉತ್ತರ ಬರೆಯುವಾಗ ಪಾಯಿಂಟ್ ಮಿಸ್ ಅಗುತ್ತಿತ್ತು. ಹಾಗಾಗಿ ಪದೇಪದೆ ಬರೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಮುಂದೆ ಐಐಟಿಯಲ್ಲಿ ಇಂಜಿನಿಯರಿಂಗ್ ಓದುವ ಆಸೆ ಇಟ್ಟುಕೊಂಡಿದ್ದೇನೆ.
| ಕೆ.ಎಚ್.ಉರ್ವಿಶ್ ಪ್ರಶಾಂತ್
ಬಿಜಿಎಸ್ ಕಾಲೇಜು, ಮೈಸೂರು
(597 ಅಂಕ -ವಿಜ್ಞಾನ -ದ್ವಿತೀಯ ರ್ಯಾಂಕ್)
ಕಾಲೇಜಿನಲ್ಲಿ ಕೋಚಿಂಗ್ ಚೆನ್ನಾಗಿತ್ತು. ಉಪನ್ಯಾಸಕರು ಪರೀಕ್ಷೆಯಲ್ಲಿ ಯಾವ ರೀತಿ ಬರೆಯಬೇಕು, ಯಾವ ಅಂಶಗಳನ್ನು ಹೇಗೆ ಪ್ರಸ್ತುತಪಡಿಸಬೇಕು ಎನ್ನುವುದನ್ನು ತಿಳಿಸಿಕೊಟ್ಟರು. ಕಾಲೇಜಿನಿಂದ ಮನೆಗೆ ಬಂದ ಬಳಿಕ ನಾನೂ ಬರೆಯುತ್ತಿದ್ದೆ. ಮುಂದೆ ವೈದ್ಯೆಯಾಗುವ ಕನಸು ಇಟ್ಟುಕೊಂಡಿದ್ದೇನೆ.
| ಜಾಹ್ನವಿ ಗುರುರಾಜ್
ಆರ್ವಿಪಿಬಿ ಕಾಲೇಜು, ಮೈಸೂರು (597 ಅಂಕ -ವಿಜ್ಞಾನ-ದ್ವಿತೀಯ ರ್ಯಾಂಕ್)
ಎಲ್ಲ ಶಿಕ್ಷಕರು ಉತ್ತಮ ಪಾಠ ಮಾಡುತ್ತಿದ್ದರು. ಅಂದಿನ ವಿಷಯವನ್ನು ಅಂದೇ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಹೀಗಾಗಿ, ಟ್ಯೂಶನ್ಗೆ ಹೋಗುವ ಅವಶ್ಯಕತೆ ಬರಲಿಲ್ಲ. ರ್ಯಾಂಕ್ ಬಂದಿರುವುದು ಅತ್ಯಂತ ಸಂತೋಷ ತಂದಿದೆ. ಮುಂದೆ ಬಿಎ ಪದವಿ ಪೂರೈಸಿ ಐಎಎಸ್ ಅಧಿಕಾರಿಯಾಗುವುದು ನನ್ನ ಗುರಿ.
| ರವೀನಾ
ಕೆ.ಇ. ಬೋರ್ಡ್ಸ್ ಸಂಯುಕ್ತ ಕಾಲೇಜು, ಧಾರವಾಡ (595 ಅಂಕ -ಕಲಾ ವಿಭಾಗ- ದ್ವಿತೀಯ ಸ್ಥಾನ)
ತಂದೆಯ ನಿಧನದ ನಂತರ ತುಂಬಾ ಕಷ್ಟ ಎದುರಿಸಬೇಕಾಯಿತು. ಇದ್ದ ಐದು ಎಕರೆ ಜಮೀನು ಸಹ ವ್ಯಾಜ್ಯದಲ್ಲಿದೆ. ಹೀಗಾಗಿ ಅಮ್ಮನೇ ಕಷ್ಟಪಟ್ಟು ಓದಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲವಾಯಿತು. ಯಾವಾಗ ಓದಬೇಕು ಅನ್ನಿಸುತ್ತದೋ ಆಗ ಏಕಾಗ್ರತೆಯಿಂದ ಓದುತ್ತಿದ್ದೆ. ಮೊಬೈಲ್ ಕೂಡ ಅಭ್ಯಾಸಕ್ಕೆ ಬಳಸಿಕೊಂಡಿದ್ದೆ.
| ವೇದಾಂತ ಜ್ಞಾನೋಬಾ ನಾವಿ
ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವೇದಾಂತ ತನ್ನ ಕುಟುಂಬದ ಹಿನ್ನೆಲೆ ವಿವರಿಸುತ್ತಾ ಬಡತನದಲ್ಲೇ ಶಿಕ್ಷಣ ಪಡೆಯುತ್ತಿರುವ ತನಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಖುಷಿಯಾಯಿತು.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಉಪನ್ಯಾಸಕರು, ಪಾಲಕರ ಸಹಕಾರದಿಂದ ರ್ಯಾಂಕ್ ಪಡೆಯಲು ಸಾಧ್ಯವಾಯಿತು. ನಿರಂತರ ಓದಿನಿಂದ ಪರೀಕ್ಷೆ ಎದುರಿಸುವುದು ಸುಲಭವಾಯಿತು. ಗ್ರಾಮೀಣ ಭಾಗದಿಂದ ಬಂದಿದ್ದರೂ ನನಗೆ ನಗರದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಲಿಲ್ಲ. ಮುಂದೆ ಇಂಜಿನಿಯರಿಂಗ್ ಮಾಡುವ ಗುರಿ ಹೊಂದಿದ್ದೇನೆ.
| ಕೆ.ವೈ.ಸಾತ್ವಿಕ್ ಪೇಸ್ ಪಿಯು ಕಾಲೇಜು, ಶಿವಮೊಗ್ಗ
(ವಿಜ್ಞಾನ-595 ಅಂಕ -ರಾಜ್ಯಕ್ಕೆ ತೃತೀಯ)