ಮಂಗನಿಗೆ ಜೀವಾವಧಿ ಸೆರೆಮನೆ ಶಿಕ್ಷೆಯಂತೆ...!

monkey 1 (1)
Published on

ಕಾನ್ಪುರ: ಕೋತಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಎಂದಾದರೂ ಕೇಳಿದ್ದೀರಾ?.  ಇಲ್ಲೊಂದು ಅಂಥ ಪ್ರಸಂಗವಿದೆ ಕೇಳಿ. ಮಿರ್ಜಾಪುರ ಜಿಲ್ಲೆಯಲ್ಲಿರುವ 'ಕಲುವಾ' ಹೆಸರಿನ ಮಂಗವೊಂದಿತ್ತು.

ಅದು ಸಾಧುವೊಬ್ಬನ ಸಾಕು ಕೋತಿಯಾಗಿದ್ದು, ಆತ ಪ್ರತಿದಿನ ಅದಕ್ಕೆ ಕುಡಿಯಲು ಮದ್ಯ ನೀಡುತ್ತಿದ್ದ. ಮಂಗ ಬರುಬರುತ್ತ ಮದ್ಯವ್ಯಸನಿಯಾಗಿಬಿಟ್ಟಿತು. ಮಧ್ಯಕೊಡುವ ಸಾಧು ಒಂದು ದಿನ ಸತ್ತುಬಿಟ್ಟ. ಕಲುವಾಗೆ ಕುಡಿಯಲು ಮದ್ಯ ಕೊಡುವವರು ಯಾರೂ ಇಲ್ಲದಂತಾಗಿ ಕಂಗಾಲಾಯಿತು. ಅದು ಹೋದಲೆಲ್ಲ ಜನರಿಗೆ ಕಚ್ಚುತ್ತ ಆಕ್ರಮಣಕಾರಿಯಾಯಿತು.

ಅದು ಇಲ್ಲಿಯವರೆಗೆ 250 ಜನರಿಗೆ ಕಚ್ಚಿದ್ದು ಅವರಲ್ಲೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಮಂಗನ ಈ ಹಾವಳಿ ಹೆಚ್ಚಾದಂತೆ ಜನ ಭಯಭೀತರಾದರು. ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮೃಗಾಲಯದ ತಂಡಗಳೇ ಬರಬೇಕಾಯಿತು..ಹಲವಾರು ಪ್ರಯತ್ನಗಳ ನಂತರ, ಕಲುವಾನನ್ನು ಹಿಡಿದು ಕಾನ್ಪುರ್ ಮೃಗಾಲಯದಲ್ಲಿಡಲಾಯಿತು.

"ಆ ಮಂಗನನ್ನು ಕೆಲವು ತಿಂಗಳು ಪ್ರತ್ಯೇಕವಾಗಿರಿಸಲಾಗಿತ್ತು ನಂತರ ಅದನ್ನು ಪ್ರತ್ಯೇಕ ಪಂಜರಕ್ಕೆ ಸ್ಥಳಾಂತರಿಸಲಾಯಿತು. ಅದರ ವರ್ತನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಮತ್ತು ಅದು ಈ ಹಿಂದಿನಂತೆಯೇ ಆಕ್ರಮಣಕಾರಿಯಾಗಿ ಉಳಿದಿದೆ. ಅದನ್ನು ಇಲ್ಲಿಗೆ ಕರೆತಂದು ಈಗ ಮೂರು ವರ್ಷಗಳಾಗಿವೆ, ಅದನ್ನು ಅದರ ಜೀವನದುದ್ದಕ್ಕೂ ಸೆರೆಯಲ್ಲಿಯೇ ಇಡಲು ನಿರ್ಧರಿಸಲಾಗಿದೆ ಎಂದು ಮೃಗಾಲಯದ ವೈದ್ಯ ಮೊಹಮ್ಮದ್ ನಾಸಿರ್ ತಿಳಿಸಿದ್ದಾರೆ.

ಆರು ವರ್ಷ ವಯಸ್ಸಿನ ಈ ಕೋತಿಯನ್ನು ಮೃಗಾಲಯದಿಂದ ಬಿಡುಗಡೆಗೊಳಿಸಿದರೆ ಮತ್ತಷ್ಟು ಆಕ್ರಮಣಕಾರಿಯಾಗುತ್ತದೆ. ಹೋದಲ್ಲೆಲ್ಲಾ ಜನರಿಗೆ ತೊಂದರೆ ಕೊಡುತ್ತದೆ. ಕಲುವಾ ಈವರೆಗೆ ತನ್ನ ಪಂಜರ ಕಾಯುವವರ ಜೊತೆ ಕೂಡ ಸ್ನೇಹದಿಂದ ಇಲ್ಲ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net