

ಆಗ್ರಾ: ತನ್ನ ಮದುವೆಯಲ್ಲಿ ಮಾಡಿದ್ದ ಊಟ ವ್ಯವಸ್ಥೆ ಸರಿಯಿರಲಿಲ್ಲ ಎಂದು ಅಸಮಾಧಾನಗೊಂಡ ಯುವಕನೊಬ್ಬ ತನ್ನ ಜತೆ ಮದುವೆಯಾದ ಹುಡುಗಿಯ ಸೋದರನನ್ನೇ ಕೊಲೆ ಮಾಡಿ, ಮೃತದೇಹವನ್ನು ಗ್ರಾಮದ ಹೊರಗೆ ಎಸೆದ ಘಟನೆ ನಡೆದಿದೆ. ಸಿಟ್ಟಿನ ಭರದಲ್ಲಿ ಆತ ಆಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ್ದರಿಂದ ಕಾರಿನಡಿ ಸಿಲುಕಿದ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಫರೂಕಾಬಾದ್ ಜಿಲ್ಲೆಯ ಶಂಶಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗೋವಿಂದಪುರ/ ಅಬ್ದುಲ್ಲಾಪುರ ಎಂಬ ಗ್ರಾಮದಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪಹಾಡ್‌ಪುರದ ನಿವಾಸಿ ಮನೋಜ್‌ಕುಮಾರ್ ಈ ಕುಕೃತ್ಯ ಎಸಗಿದ ಯುವಕ. ಬಾರಾತ್‌ನಲ್ಲಿ ಬಂದಿದ್ದ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಜತೆ ಈತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
‘‘ರಾತ್ರಿ ಸುಮಾರು ಎಂಟೂವರೆಗೆ ಬಾರಾತ್ ಬಂತು. ವರನ ಜತೆ ಆತನ ಸ್ನೇಹಿತರು ಮತ್ತು ಸಂಬಂಧಿಕರು ಎಲ್ಲರಿಗೂ ಸ್ನಾೃಕ್ಸ್, ನೀರು ಕೊಟ್ಟೆವು. ನಂತರ ಊಟಕ್ಕೂ ವ್ಯವಸ್ಥೆ ಮಾಡಿದೆವು. ಆದರೆ ಅವರಲ್ಲಿ ಬಹುತೇಕ ಜನರು ಈ ವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ ಜಗಳ ತೆಗೆದರು. ಅವರೆಲ್ಲರೂ ಮದ್ಯಪಾನ ಮಾಡಿದ್ದರಿಂದ ಮಾತಿಗೆ ಮಾತು ಬೆಳೆಯಿತು. ಪಿಸ್ತೂಲ್ ತೆಗೆದು ಗುಂಡು ಹಾರಿಸಿದರು. ತಿಂಡಿ-ತಿನಿಸು ಕೊಡುತ್ತಿದ್ದ ವಧುವಿನ ಸೋದರನನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೊರಟು ಹೋದರು. ವರನಿಗೆ ಹಲವು ಬಾರಿ ಕರೆ ಮಾಡಿದರೂ ಆತನ ಸಿಟ್ಟು ಇಳಿದಿರಲಿಲ್ಲ. ಕೊನೆಗೆ ಬೆಳಗಿನ ಜಾವ 3 ಗಂಟೆಗೆ ಗ್ರಾಮದ ಹೊರವಲಯದಲ್ಲಿ ಆತನ ದೇಹವನ್ನು ಎಸೆದು ಹೋಗಿದ್ದರು. ಅಲ್ಲಿಗೆ ಹೋಗಿ ನೋಡಿದಾಗ ಆತನ ಹಣೆ ಮೇಲೆ ಇರಿತದ ಗುರುತುಗಳಿದ್ದವು. ಕತ್ತು ಹಿಸುಕಿ ಸಾಯಿಸಿದ್ದರು’’ ಎಂದು ವಧುವಿನ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಪೊಲೀಸರೀಗ ಆ ವರ ಮತ್ತವನ ಸಂಬಂಧಿಕರು-ಸ್ನೇಹಿತರನ್ನು ಹುಡುಕುತ್ತಿದ್ದಾರೆ.