

ನವದೆಹಲಿ: ಕೊವಿಡ್-19 ನಿಂದ ಎರಡೂವರೆ ತಿಂಗಳು ಲಾಕ್ಡೌನ್ ಆಗಿದ್ದ ದೇಶದಲ್ಲಿ ಅನ್ಲಾಕ್-1 ಜಾರಿಯಾಗಿ ಎರಡುವಾರ ಕಳೆದಿದೆ. ಹಾಗೇ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿಬಾರಿಯೂ ಲಾಕ್ಡೌನ್ ಮುಂದುವರಿಸುವ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ 21 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಇನ್ನುಳಿದ 15 ರಾಜ್ಯಗಳ ಸಿಎಂಗಳೊಂದಿಗೆ ನಾಳೆ ಸಭೆ ನಡೆಸಲಿದ್ದಾರೆ.
ಅನ್ಲಾಕ್ ಜಾರಿಯಾಗಿ ಎರಡು ವಾರ ಕಳೆದಿದೆ. ಈ ಸಮಯದಲ್ಲಿ ನಮಗಾದ ಅನುಭವ ಮುಂದಿನ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಲಿದೆ. ನಾನಿವತ್ತು ಎಲ್ಲ ರಾಜ್ಯಗಳಲ್ಲಿ ಇರುವ ವಾಸ್ತವ ಸಂಗತಿಯನ್ನು ತಿಳಿಯಲು ಇಚ್ಛಿಸುತ್ತೇನೆ. ಕೊವಿಡ್-19 ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ವಿವರಿಸಿ. ಜತೆಗೆ ನಿಮ್ಮ ಸಲಹೆಗಳನ್ನೂ ನೀಡಿ. ಇದರಿಂದ ನಾವು ಮುಂದಿನ ಕಾರ್ಯತಂತ್ರ ರೂಪಿಸಲು ಸಹಾಯವಾಗುತ್ತದೆ ಎಂದು ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ 21 ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಸಿದರು. ಇದನ್ನೂ ಓದಿ: ಗಡಗಡ ನಡುಗಿತು ಟ್ರಂಪ್ ಕೈ, ಶುರುವಾಯ್ತು ಗುಮಾನಿ: ವಿಡಿಯೋ ವೈರಲ್
ಭಾರತದಲ್ಲಿ ಕರೊನಾ ವೈರಸ್ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.50ಕ್ಕೂ ಹೆಚ್ಚು ಇದೆ. ಹಾಗಾಗಿ ಯಾರೂ ಭಯಪಡುವ ಅಗತ್ಯವಿಲ್ಲ. ಭಾರತದಲ್ಲಿ ಕರೊನಾದಿಂದ ಸಾವನ್ನಪ್ಪುತ್ತಿರುವುದನ್ನು ನೋಡಿದರೆ ನಮಗೆ ಆತಂಕ ಆಗುತ್ತದೆ. ಆದರೆ ಒಂದು ಸತ್ಯವನ್ನು ಎಲ್ಲರೂ ತಿಳಿಯಬೇಕು. ಭಾರತದಲ್ಲಿ ಕೊವಿಡ್-19ನಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ತುಂಬ ಕಡಿಮೆ ಇದೆ. ನಮ್ಮ ದೇಶ ಕರೊನಾ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇದನ್ನೂ ಓದಿ: ಸುಶಾಂತ್ ಸಿಂಗ್ ಓರ್ವ ನಟ ಎಂಬುದೂ ರಾಹುಲ್ ಗಾಂಧಿಗೆ ಗೊತ್ತಿಲ್ಲವೇ? ಮತ್ತೊಂದು ಎಡವಟ್ಟು?
ಈಗಿರುವ ಪರಿಸ್ಥಿತಿಯಲ್ಲಿ ಮಾಸ್ಕ್ ಇಲ್ಲದೆ ಯಾರೂ ಹೊರಗೆ ಹೋಗಬೇಡಿ. ಆ ಬಗ್ಗೆ ಯೋಚನೆಯನ್ನೂ ಮಾಡಬೇಡಿ. ದೋ ಗಜ್ ಕೀ ದೂರಿ, ( ಎರಡು ಗಜ ಅಂತರ), ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆಗಳೆಲ್ಲ ಪ್ರಥಮ ಆದ್ಯತೆಗಳಾಗಿರಲಿ. ಈಗೀಗ ಎಲ್ಲ ಅಂಗಡಿ, ಮಾರುಕಟ್ಟೆಗಳು ತೆರೆದಿವೆ. ಅಲ್ಲಿಗೆ ಹೋಗಬೇಕಾದ ಜನರು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬ ಮುಖ್ಯ ಎಂದರು.