

ಕುಂದಾಪುರ: ಬೆಂಗಳೂರಿನಿಂದ ತನ್ನ ಊರಿಗೆ ಹೊರಟಿದ್ದ ಸಾಫ್ಟ್ವೇರ್ ಇಂಜಿನಿಯರ್ ಯುವಕ ಬಸ್ನಲ್ಲಿಯೇ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕೋಟೇಶ್ವರ ಕುಂಬ್ರಿ ನಿವಾಸಿ ಚೈತನ್ಯ (25) ಎಂಬಾತ ಮೃತ ಯುವಕ. ಈತ ಬೆಂಗಳೂರಿನಿಂದ ಖಾಸಗಿ ಬಸ್ನಲ್ಲಿ ಊರಿಗೆ ಮರಳುತ್ತಿದ್ದ. ಆದರೆ ಬಸ್ನಲ್ಲಿಯೇ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ.
ಚೈತನ್ಯ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು, ಎರಡು ವರ್ಷಗಳಿಂದ ಮಾರತಹಳ್ಳಿಯಲ್ಲಿಯೇ ಕೆಲಸ ಮಾಡುತ್ತಿದ್ದರು. ಈಗ ಕೆಲಸ ಕಡಿಮೆ ಇರುವ ಕಾರಣ, ಊರಿಗೆ ಬರುತ್ತಿರುವುದಾಗಿ ಮೊದಲೇ ಮನೆಗೆ ತಿಳಿಸಿದ್ದರು. ಹಾಗೇ ಆನ್ಲೈನ್ನಲ್ಲಿ ಟಿಕೆಟ್ ಕೂಡ ಬುಕ್ ಮಾಡಿದ್ದರು. ಇದನ್ನೂ ಓದಿ: ಕೊವಿಡ್-19ಗೆ ಯಾರೂ ಭಯಪಡಬೇಡಿ…ಭಾರತ ಸಮರ್ಥವಾಗಿ ಹೋರಾಡುತ್ತಿದೆ: ಪ್ರಧಾನಿ ಮೋದಿ
ಸೋಮವಾರ ರಾತ್ರಿ ಖಾಸಗಿ ಬಸ್ನಲ್ಲಿ ಬೆಂಗಳೂರಿನಿಂದ ಹೊರಟಿದ್ದ ಚೈತನ್ಯ, ಮುಂಜಾನೆ 6.30ರಹೊತ್ತಿಗೆ ಮನೆಗೆ ಕರೆ ಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ಹೇಳಿದ್ದರು. ಕೋಟೇಶ್ವರದಲ್ಲಿ ಇಳಿಯಬೇಕಾದ ಚೈತನ್ಯ ಅಲ್ಲಿ ಇಳಿಯದ ಕಾರಣ ಅನುಮಾನಗೊಂಡ ಬಸ್ ನಿರ್ವಾಹಕ ಬಂದು ನೋಡಿದಾಗ ಅವರು ಅಸ್ವಸ್ಥರಾಗಿದ್ದರು. ಕೂಡಲೇ ಮನೆಯವರಿಗೆ ವಿಷಯ ಮುಟ್ಟಿಸಿ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕೋವಿಡ್-19 ಹಿನ್ನೆಲೆ ಆಸ್ಪತ್ರೆಯನ್ನು ಸ್ಥಳಾಂತರಿಸಿದ್ದರಿಂದ ಅಲ್ಲೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಚೈತನ್ಯ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಸಾವಿನ ನಿಖರ ಕಾರಣಗಳಿಗಾಗಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: 2019ರ ಜೂನ್ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…
ಮೂಲತಃ ಬ್ರಹ್ಮಾವರ ಬಿರ್ತಿ ನಿವಾಸಿಯಾಗಿರುವ ವಿಷ್ಣುಮೂರ್ತಿ ಆಚಾರಿ ದೇವಸ್ಥಾನವೊಂದರ ಕ್ಲರ್ಕ್ ಆಗಿ ಕಳೆದ ಕೆಲ ವರ್ಷಗಳಿಂದ ಕೋಟೇಶ್ವರದ ಕುಂಬ್ರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹಿರಿಯ ಮಗಳು ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ಇನ್ನೊಬ್ಬ ಮಗಳು ಆಯುರ್ವೇದ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಇರುವ ಓರ್ವ ಪುತ್ರನ ಅಕಾಲಿಕ ಮರಣ ವಿಷ್ಣುಮೂರ್ತಿ ಆಚಾರಿಯವರ ಇಡೀ ಕುಟುಂಬವನ್ನು ಕಣ್ಣೀರಗಡಲಲ್ಲಿ ಮುಳುಗಿಸಿದೆ. ಚೈತನ್ಯ ತಂದೆ, ತಾಯಿ, ಇಬ್ಬರು ಸಹೋದರಿ, ಕುಟುಂಬಿಕರು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.