ನಾನು ಸಾಯುವೆ, ನನ್ನ ಬ್ಯಾನರ್​ ಹಾಕಿ… ಎಂದು ಪ್ರಾಣಬಿಟ್ಟ ವಿದ್ಯಾರ್ಥಿ! ಅಸಲಿ ಕಾರಣ ಬಿಚ್ಚಿಟ್ಟ ಸ್ನೇಹಿತರು

srinivasapura student suicide case
Published on

ಶ್ರೀನಿವಾಸಪುರ: ‘Miss u Friends, I am going to RIP, nandu banner haki’ ಎಂದು ಸ್ನೇಹಿತರ ವಾಟ್ಸ್ಆ್ಯಪ್​ ಗ್ರೂಪ್​ಗೆ ಮೆಸೇಜ್​ ಕಳಿಸಿ ಕೆರೆಗೆ ಹಾರಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಅಸಲಿ ಕಾರಣ ಬಯಲಾಗಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಕೊಳ್ಳೂರು ಕಾಲನಿಯ 17 ವರ್ಷದ ಕಿಶೋರ್ ​ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಮಂಗಳವಾರ ಬೆಳಗ್ಗೆ ಕಾಲೇಜಿಗೆಂದು ಹೋದವನು ಸಂಜೆ ವಾಪಸ್​ ಮನೆಗೆ ಬಂದಿರಲಿಲ್ಲ. ಅಂದು ಸಂಜೆ ಸ್ನೇಹಿತರಿಗೆ "ನಾನು ಸಾಯುತ್ತಿದ್ದೇನೆ, ಮಿಸ್​ ಯೂ ಫ್ರೆಂಡ್ಸ್​... ಬ್ಯಾನರ್​ ಹಾಕಿ ನನಗೆ ಶ್ರದ್ಧಾಂಜಲಿ ಸಲ್ಲಿಸಿ' ಎಂದು ಸಂದೇಶ ಕಳುಹಿಸಿದ್ದ. ಜತೆಗೆ ಶ್ರೀನಿವಾಸಪುರ ಪಟ್ಟಣದ ಅಮಾನಿ ಕೆರೆಯ ಫೋಟೋವನ್ನೂ ಕಳುಹಿಸಿದ್ದ. ಗೆಳೆಯರು, ‘ಯಾಕೋ ಹೀಗೆಲ್ಲ ಹೇಳ್ತಿಯಾ? ಕಾಲೇಜಿಗೆ ಬಾರೋ’ ಎಂದು ರಿಪ್ಲೇ ಮಾಡಿದ್ದು, ಆನಂತರ ಕಿಶೋರ್​ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಾದರೂ ಪ್ರಯೋಜನ ಆಗಲೇ ಇಲ್ಲ. ಆ ಕೂಡಲೇ ಸ್ನೇಹಿತರು ಕಿಶೋರ್​ ಪಾಲಕರಿಗೂ ಮಾಹಿತಿ ನೀಡಿದ್ದರು.

ಎಲ್ಲರೂ ಸ್ಥಳಕ್ಕೆ ಬರುವಷ್ಟರಲ್ಲಿ ಕಿಶೋರ್​ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದ. ಕೆರೆ ಬಳಿಯೇ ಚಪ್ಪಲಿ ಮತ್ತು ಬಟ್ಟೆ ಸಿಕ್ಕಿತ್ತು. ಅಂದು ರಾತ್ರಿ ಕತ್ತಲಾದ ಕಾರಣ ಬುಧವಾರ ಬೆಳಗ್ಗೆ ಕಿಶೋರ್ ಕುಮಾರ್ ಶವವನ್ನ ಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಇನ್ನು ಈ ಕಿಶೋರ್​ ಸಾಯುವ ನಿರ್ಧಾರ ಮಾಡಿದ್ದು ಏಕೆ ಗೊತ್ತಾ?

ಕಿಶೋರ್​ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಗೆ ಐ ಲವ್​ ಯೂ ಎಂದು ಮೆಸೇಜ್​ ಮಾಡಿದ್ದು, ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಳು. ಪ್ರಾಂಶುಪಾಲರು ಕಿಶೋರ್​ನನ್ನು ಕರೆಸಿ ಬುದ್ಧಿ ಹೇಳಿದ್ದರು. ನೊಂದ ಕಿಶೋರ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ನೇಹಿತರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಪೊಲೀಸರಿಗೆ ದೂರು: ನನ್ನ ಮಗನಿಗೆ ಆಗಾಗ ಹೊಟ್ಟೆ ನೋವು ಬರುತ್ತಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕಿಶೋರ್​ ತಂದೆ ವೆಂಕಟೇಶಪ್ಪ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net