

Snake venom: ಮನುಷ್ಯರಿಗೆ ಹಾವು ಕಡಿದರೆ ಅದರ ವಿಷದಿಂದ ಗುಣವಾಗಲು ಹಲವು ಆಯುರ್ವೇದ ಮತ್ತು ಅಲೋಪತಿ ಚಿಕಿತ್ಸೆಗಳಿವೆ. ಹಾವು ಕಡಿದಾಗ ಬಹುತೇಕ ಮಂದಿ ಮೊದಲು ಆಸ್ಪತ್ರೆಗೆ ಧಾವಿಸುತ್ತಾರೆ. ಆದರೆ, ಹಾವಿನ ವಿಷಕ್ಕೆ ಚಿಕಿತ್ಸೆ ನೀಡುವ ಸಾಂಪ್ರದಾಯಿಕ ವಿಧಾನಗಳು ಇಂದಿಗೂ ಅಸ್ತಿತ್ವದಲ್ಲಿವೆ. ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
ಹಾವು ಕಡಿತಕ್ಕೆ ಒಳಗಾದ ಮಹಿಳೆಯ ದೇಹದಿಂದ ವಿಷವನ್ನು ತೆಗೆದುಹಾಕಲು ಹಳ್ಳಿಯ ಜನರು ಅನುಸರಿಸಿದ ವಿಧಾನವನ್ನು ವೈರಲ್ ವಿಡಿಯೋ ತೋರಿಸಿದೆ. ಮಹಿಳೆಯನ್ನು ಹಾಸಿಗೆಯ ಮೇಲೆ ಮಲಗಿಸಿ ಗಾಯದ ಸುತ್ತಲೂ ಬೇವಿನ ಎಲೆಗಳಿಂದ ಒರೆಸುತ್ತಾ ಮಂತ್ರ ಜಪಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ಜಾರ್ಖಂಡ್‌ನ ಗೋಡಾ ಜಿಲ್ಲೆಯ ಕುಸ್ಮಿ ಗ್ರಾಮದಲ್ಲಿ ನಡೆಯುವ ಚಿಕಿತ್ಸೆಯ ವಿಧಾನವಾಗಿದೆ.
ಈ ಘಟನೆಯನ್ನು ಪರಿಶೀಲಿಸಲು, ಸ್ಥಳೀಯ ಮಾಧ್ಯವೊಂದರ ವರದಿಗಾರರು ಗ್ರಾಮಕ್ಕೆ ಭೇಟಿ ನೀಡಿದಾಗ, ಶತಮಾನಗಳಿಂದಲೂ ಈ ಪದ್ಧತಿ ನಡೆದುಕೊಂಡು ಬರುತ್ತಿದೆ ಎಂದು ಗ್ರಾಮಸ್ಥರು ಹಂಚಿಕೊಂಡಿದ್ದಾರೆ. ಈ ವಿಧಾನವನ್ನು ಬಳಸಿಕೊಂಡು ಅನೇಕ ಜನರು ಯಶಸ್ವಿಯಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯ ಹೆಸರು ಸುಲ್ಖಿ ದೇವಿ. ಇತ್ತೀಚೆಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಬಳಿಕ ಆಕೆ ಉಪೇಂದ್ರ ಯಾದವ್ ಎಂಬುವರಿಗೆ ಮಾಹಿತಿ ನೀಡಿದ್ದಾಳೆ. ನಂತರ ಯಾದವ್ ಅವರು ಸಾಂಪ್ರದಾಯಿಕ ಚಿಕಿತ್ಸೆಯನ್ನು ಪ್ರಾರಂಭಿಸಲು ಇತರ ಗ್ರಾಮಸ್ಥರನ್ನು ಕರೆದರು. ನಂತರ ಗ್ರಾಮಸ್ಥರು ತಮ್ಮ ಪ್ರಾಚೀನ ಚಿಕಿತ್ಸೆಯನ್ನು ಪ್ರಾರಂಭಿಸಿದರು ಮತ್ತು ಮಹಿಳೆಯ ಜೀವವನ್ನು ಉಳಿಸಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಉಪೇಂದ್ರ ಯಾದವ್, ಈ ಸಾಂಪ್ರದಾಯಿಕ ವಿಧಾನವನ್ನು ಬಳಸಿಕೊಂಡು ನೂರಾರು ಜನರಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಸಂತ್ರಸ್ತರ ಕೈಯನ್ನು ಪರೀಕ್ಷಿಸುವ ಮೂಲಕ, ಯಾವ ರೀತಿಯ ಹಾವು ಕಚ್ಚಿದೆ ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದರು. ಬಳಿಕ ಬೇವಿನ ಎಲೆಗಳನ್ನು ಬಳಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಲ್ಲದೆ, ವಿಷಹರಿ ದೇವಿಯ ಮಂತ್ರಗಳನ್ನು ಈ ವೇಳೆ ಪಠಿಸಲಾಗುತ್ತದೆ. ಬೇವಿನ ಎಲೆಗಳಲ್ಲಿರುವ ಔಷಧೀಯ ಗುಣಗಳು ಹಾವಿನ ವಿಷವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ ಎಂದು ಉಪೇಂದ್ರ ಯಾದವ್ ಹೇಳಿದ್ದಾರೆ.
ವಿಷಪೂರಿತ ಹಾವು ಕಚ್ಚಿದ ಕೆಲವು ರೋಗಿಗಳು ನಮ್ಮ ಬಳಿಗೆ ಬಂದಾಗಲೆಲ್ಲಾ ರೋಗಿಗಳ ಕುಟುಂಬಗಳಿಗೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ನಾವು ಸಲಹೆ ನೀಡುತ್ತೇವೆ ಎಂದು ಯಾದವ್ ಅವರು ಹೇಳಿದರು. ಇತ್ತೀಚೆಗೆ ಹಾವು ಕಚ್ಚಿದ ಸುಲ್ಖಿ ದೇವಿ ಎಂಬಾಕೆ ಮಾತನಾಡಿ, ಹಾವು ಕಚ್ಚಿದ ನಂತರ ಸಾಂಪ್ರದಾಯಿಕ ಚಿಕಿತ್ಸೆಗಾಗಿ ಗ್ರಾಮಸ್ಥರನ್ನು ಸಂಪರ್ಕಿಸಿದೆ. ಚಿಕಿತ್ಸೆ ಪಡೆದು ಈಗ ಸಂಪೂರ್ಣ ಫಿಟ್ ಆಗಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)