

ನವದೆಹಲಿ: ದೆಹಲಿಯ ಸಿಬಿಐ(ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಸಿಬಿಐ ಕಚೇರಿಯಲ್ಲಿ ಎಸಿ ಪ್ಲಾಂಟ್ ಕೋಣೆಯೊಳಗಿನ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದ್ದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಸುದ್ದಿ ತಿಳಿಯುತ್ತಿದ್ದಂತೆ 5 ಅಗ್ನಿಶಾಮಕ ವಾಹನದಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಅವಘಡದಲ್ಲಿ ಅದೃಷ್ಟವಶಾತ್ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಸಿಬಿಐ ಕಟ್ಟಡದಲ್ಲಿನ ಜನರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣ ಹೊಗೆ ಹೊರಹೊಮ್ಮಿತು. ಯಾವುದೇ ತರಹದ ಹಾನಿ ಸಂಭವಿಸಿಲ್ಲ. ಹೊಗೆಯ ನಂತರ, ಸ್ವಯಂಚಾಲಿತ ಸಿಂಪರಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಸ್ವಲ್ಪ ಸಮಯದ ನಂತರ ಕಚೇರಿಯಲ್ಲಿನ ಕಾರ್ಯ ಆರಂಭ ಆಗಲಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.